ರಾಜ್ಯ ಬೀಜ ನಿಗಮ : ರಾಜೇಂದ್ರ ಪ್ರಸಾದ್ ಅತ್ಯಧಿಕ ಮತಗಳಿಂದ 4ನೇ ಬಾರಿಗೆ ಆಯ್ಕೆ

ರಾಜ್ಯ ಬೀಜ ನಿಗಮ : ರಾಜೇಂದ್ರ ಪ್ರಸಾದ್ ಅತ್ಯಧಿಕ ಮತಗಳಿಂದ 4ನೇ ಬಾರಿಗೆ ಆಯ್ಕೆ - Janathavaniದಾವಣಗೆರೆ,ಡಿ.8- ಕರ್ನಾಟಕ ರಾಜ್ಯ ಬೀಜ ನಿಗಮದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ವಲಯ – 2 ರಿಂದ ಸಾವಜ್ಜಿ ರಾಜೇಂದ್ರ ಪ್ರಸಾದ್ ಅವರು ಭಾರೀ ಮತಗಳ ಅಂತರದಿಂದ ಜಯ ಗಳಿಸಿದ್ದು, ಸತತ 4ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಬೀಜ ನಿಗಮದ ಆಡಳಿತ ಮಂಡಳಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ತಲಾ ಮೂವರಂತೆ ಆರು ಅಧಿಕಾರಿಗಳು, ಸರ್ಕಾರದಿಂದ ನಾಮ ನಿರ್ದೇಶಿತಗೊಳ್ಳುವ ಇಬ್ಬರು, ನಾಲ್ವರು ಚುನಾಯಿತ ಸದಸ್ಯರು ಸೇರಿದಂತೆ, ಒಟ್ಟು 12 ನಿರ್ದೇಶಕರುಗಳಿದ್ದು, ಇವರಲ್ಲಿ ರಾಜೇಂದ್ರ  ಪ್ರಸಾದ್ ಒಬ್ಬರಾಗಿದ್ದಾರೆ.

ಚುನಾಯಿಸಲ್ಪಡುವ ನಾಲ್ವರು ನಿರ್ದೇಶಕರುಗಳ ಆಯ್ಕೆಗೆ ರಾಜ್ಯದಲ್ಲಿ ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಈ ಪೈಕಿ ವಲಯ ಎರಡರಿಂದ ಸ್ಪರ್ಧೆ ಮಾಡಿದ್ದ ರಾಜೇಂದ್ರ ಪ್ರಸಾದ್ ಅವರು ತಮ್ಮ ಪ್ರತಿಸ್ಪರ್ಧಿ ರವಿಕುಮಾರ್ ಪಾಟೀಲ್ ಅವರನ್ನು 2,864 ಮತಗಳ ಅಂತರದಿಂದ ಪರಾಭವಗೊಳಿಸಿ ಜಯ ಗಳಿಸಿದ್ದಾರೆ.

ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ವಲಯ ಎರಡರಿಂದ ಆಯ್ಕೆ ಬಯಸಿ ರವಿಕುಮಾರ್ ಪಾಟೀಲ್ ಮತ್ತು ರಾಜೇಂದ್ರ ಪ್ರಸಾದ್ ಸ್ಪರ್ಧಿಸಿದ್ದರು. ಒಟ್ಟು 6,538 ಮತಗಳಲ್ಲಿ ಚಲಾಯಿಸಲ್ಪಟ್ಟ 3,758 ಮತಗಳಲ್ಲಿ ರಾಜೇಂದ್ರ  ಪ್ರಸಾದ್ 3,311 ಮತಗಳನ್ನು ಗಳಿಸಿದರೆ, ರವಿಕುಮಾರ್ ಕೇವಲ 447 ಮತಗಳಿಗೆ ತೃಪ್ತಿಪಟ್ಟುಕೊಂಡರು.

2011ರ ಚುನಾವಣೆಯಲ್ಲಿ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಒತ್ತಾಸೆಯಿಂದಾಗಿ ಮಹಾಬಲೇಶ್ವರ ಗೌಡರ ವಿರುದ್ಧ ಸ್ಪರ್ಧಿಸಿ ಕೇವಲ 13 ಮತಗಳಿಂದ ಆಯ್ಕೆಯಾಗಿದ್ದ ರಾಜೇಂದ್ರ ಪ್ರಸಾದ್, 2014ರ ಚುನಾವಣೆಯಲ್ಲೂ ಮತ್ತೆ ಮಹಾಬಲೇಶ್ವರ ಗೌಡರ ವಿರುದ್ಧ 455 ಮತಗಳನ್ನು ಹೆಚ್ಚು ಪಡೆದು ಚುನಾಯಿತಗೊಂಡಿದ್ದರು. 2017ರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಅವರು, ಈ ಬಾರಿ ಮಹಾಬಲೇಶ್ವರ ಗೌಡರ ಅಳಿಯ ರವಿಕುಮಾರ್ ಪಾಟೀಲ್ ವಿರುದ್ಧ ಭಾರೀ ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.

ಮೊನ್ನೆ ನಡೆದಿದ್ದ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಇಂದು ನಡೆದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಂಡಿತು. ಒಂದೂ ಮತಗಳು ತಿರಸ್ಕೃತಗೊಂಡಿಲ್ಲ.

ಫಲಿತಾಂಶದ ನಂತರ `ಜನತಾವಾಣಿ’ಯೊಂದಿಗೆ ಮಾತನಾಡಿದ ರಾಜೇಂದ್ರ ಪ್ರಸಾದ್, ಐದು ದಶಕಗಳ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಇನ್ನೂ ಉತ್ತಮ ಸೇವೆ ಸಲ್ಲಿಸುವುದರ ಮೂಲಕ ರೈತ ಬಂಧುಗಳ ಋಣ ತೀರಿಸುವುದಾಗಿ ತಿಳಿಸಿದ್ದಾರೆ.

ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಮಾಜಿ ಶಾಸಕರುಗಳಾದ ಹೆಚ್.ಪಿ. ರಾಜೇಶ್, ಹೆಚ್.ಎಸ್. ಶಿವಶಂಕರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬೇವಿನಹಳ್ಳಿ ಬಸವನಗೌಡ್ರು, ನಿವೃತ್ತ ಅಧಿಕಾರಿಗಳಾದ ಕರೇಗೌಡರ್, ರವಿಕುಮಾರ್, ನಿವೃತ್ತ ಶಿಕ್ಷಕ ಆಂಜನೇಯ ಅವರುಗಳಲ್ಲದೇ, ಪಕ್ಷಾತೀತವಾಗಿ ಅನೇಕ ಮುಖಂಡರು, ಕಾರ್ಯಕರ್ತರು ತಮ್ಮ ಗೆಲುವಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ್ದಾರೆ ಎಂದು ಸ್ಮರಿಸಿರುವ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!