ಶಾಂತಿಯುತ ಭಾರತ್ ಬಂದ್

ದೇಶಾದ್ಯಂತ ವಾಣಿಜ್ಯ ಚಟುವಟಿಕೆ ಸ್ತಬ್ಧ

ನವದೆಹಲಿ, ಡಿ. 8 – ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರು ಕರೆ ನೀಡಿದ್ದ ಬಂದ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ರಸ್ತೆ ಸಂಚಾರ ಹಾಗೂ ಸಾರಿಗೆ ಮೇಲೆ ಪರಿಣಾಮವಾಗಿದೆ.

ತುರ್ತು ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಪಂಜಾಬ್, ಹರಿಯಾಣ ಹಾಗೂ ಛತ್ತೀಸ್‌ಘಡಗಳಂತಹ ರಾಜ್ಯಗಳಲ್ಲಿ ಬಂದ್ ಬಿಸಿ ಹೆಚ್ಚಾಗಿತ್ತು.

ಬಂದ್ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಬಂದೋಬಸ್ತ್‌ಗೆ ಕ್ರಮ ತೆಗೆದುಕೊಳ್ಳಲಾಗಿತ್ತು. ದೇಶದ ಬಹುತೇಕ ಭಾಗಗಳಲ್ಲಿ ಬಂದ್ ಶಾಂತಿಯುತವಾಗಿತ್ತು.

ಬಂದ್ ಕೇಂದ್ರವಾಗಿದ್ದ ದೆಹಲಿಯಲ್ಲಿ ಪ್ರಮುಖ ಮಾರುಕಟ್ಟೆಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿತ್ತು. ಆದರೆ, ಆರೋಪವನ್ನು ನಗರ ಪೊಲೀಸರು ತಳ್ಳಿ ಹಾಕಿದ್ದಾರೆ.

ಬಂದ್‌ ರೈತರ ಶಕ್ತಿಯನ್ನು ತೋರಿಸಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮೊಹಲ್ಲಾ ಹೇಳಿದ್ದಾರೆ.

ಮೂರು ಕಾಯ್ದೆಗಳನ್ನು ಸಂಪೂರ್ಣವಾಗಿ ವಾಪಸ್ ಪಡೆಯಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸಿದ್ಧ ಎಂದಿದ್ದಾರೆ.

ಪಂಜಾಬ್ ಹಾಗೂ ಹರಿಯಾಣಗಳಲ್ಲಿ ಬಂದ್ ತೀವ್ರವಾಗಿತ್ತು. ಅಂಗಡಿ – ಮುಂಗಟ್ಟುಗಳು ಮುಚ್ಚಿದ್ದವು. 3,400 ಪೆಟ್ರೋಲ್ ಪಂಪ್‌ಗಳೂ ಸಹ ಬಂದ್ ಆಗಿದ್ದವು. ಪಂಜಾಬ್‌ನ ಎಲ್ಲ ಪ್ರಮುಖ ಪಕ್ಷಗಳು ಬಂದ್‌ಗೆ ಬೆಂಬಲಿಸಿದ್ದವು.

ರೈತರನ್ನು ಬೆಂಬಲಿಸಿ 50 ಸಾವಿರ ಸರ್ಕಾರಿ ನೌಕರರು ಸಾಮೂಹಿಕ ರಜೆ ಪಡೆದಿದ್ದಾರೆ ಎಂದು ಪಂಜಾಬ್ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಸಂಖಚೈನ್ ಖೈರಾ ತಿಳಿಸಿದ್ದಾರೆ.

ಹರಿಯಾಣದಲ್ಲಿ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಐ.ಎನ್.ಎಲ್.ಡಿ.ಗಳು ಬಂದ್‌ಗೆ ಬೆಂಬಲಿಸಿದ್ದವು.

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಬಂದ್‌ಗೆ ಬೆಂಬಲ ನೀಡಿದ್ದವು. ಆದರೆ, ರಾಜ್ಯದಲ್ಲಿ ಬಂದ್‌ಗೆ ಭಾಗಶಃ ಪ್ರತಿಕ್ರಿಯೆ ದೊರೆತಿದೆ. ರೈಲ್ವೆ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿ ಪಡಿಸಿದ್ದರು. ಆದರೆ, ಬಸ್ ಹಾಗೂ ಟ್ಯಾಕ್ಸಿಗಳು ಎದಿನಂತೆ ಕಾರ್ಯ ನಿರ್ವಹಿಸಿವೆ.

ಕಾಂಗ್ರೆಸ್ ಆಡಳಿತದ ಛತ್ತೀಸ್‌ಘಡದಲ್ಲಿ ಬಂದ್ ಯಶಸ್ವಿಯಾಗಿತ್ತು. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆ – ಎನ್‌ಸಿಪಿ – ಕಾಂಗ್ರೆಸ್‌ಗಳು ಬಂದ್‌ಗೆ ಬೆಂಬಲಿಸಿದ್ದವು. ಪ್ರಮುಖ ನಗರಗಳ ಸಗಟು ಮಾರುಕಟ್ಟೆಗಳು ಹಾಗೂ ಹಲವಾರು ಎಪಿಎಂಸಿಗಳು ಬಂದ್ ಆಗಿದ್ದವು.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ರಾಲೆಗಣ ಸಿದ್ದಿ ಹಳ್ಳಿಯಲ್ಲಿ ದಿನವಿಡೀ ಉಪವಾಸ ನಡೆಸಿದರು.

ಮೇಘಾಲಯ ಹಾಗೂ ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಬಂದ್ ಬಿಸಿ ತಟ್ಟಲಿಲ್ಲ.

ರಾಜ್ಯದಲ್ಲಿ ಸಿಗದ ನಿರೀಕ್ಷಿತ ಯಶಸ್ಸು

ಬೆಂಗಳೂರು, ಡಿ.8- ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಬೆಂಬಲಿಸಿ ರಾಜ್ಯದಲ್ಲೂ ರೈತರು  ಬೀದಿಗಿಳಿದರಾದರೂ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ.

ಬಂದ್ ಕರೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ವಾಣಿಜ್ಯೋದ್ಯಮಗಳು ನಿರೀಕ್ಷಿತ ಪ್ರಮಾಣದಲ್ಲಿ ಕೈಜೋಡಿಸಲಿಲ್ಲ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರೈತರ ಹೋರಾಟಕ್ಕೆ ಬೆಂಬಲ ನೀಡಿದರೂ ರಾಜ್ಯದ ಕೆಲವು ವೃತ್ತಗಳಲ್ಲಿ ಮುಖಂಡರ, ನಾಯಕರ ಭಾಷಣಕ್ಕೆ ಸೀಮಿತಗೊಂಡಿತು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ನಂತರ ಜೆಡಿಎಸ್ ಶಾಸಕರು ರೈತರಿಗೆ ಬೆಂಬಲ ಘೋಷಿಸಿ ಮಹಾತ್ಮ ಗಾಂಧೀ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಸದನದಿಂದ ಹೊರ ನಡೆದರು.

ರೈತರು ಮತ್ತು ಕೆಲವು ಸಂಘ-ಸಂಸ್ಥೆಗಳು ಕೇವಲ ರಸ್ತೆ ರೋಕೋ, ಮೆರವಣಿಗೆ ಮತ್ತು ಕೇಂದ್ರ – ರಾಜ್ಯ ಸರ್ಕಾರಗಳ ವಿರುದ್ಧ ಸಭೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಗಳ ವಿರುದ್ಧ ಹರಿಹಾಯ್ದರು.

ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಆ ಪಕ್ಷಗಳ ನಾಯಕರು ವಿಧಾನ ಸೌಧ ಮತ್ತು ವಿಕಾಸಸೌಧದ ನಡುವೆ ಇರುವ ಗಾಂಧೀ ಪ್ರತಿಮೆ ಬಳಿ ಕೆಲ ಕಾಲ ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತ್ರ ನಗರದ ಟೌನ್ ಹಾಲ್ ಬಳಿ ರೈತರು ಹಾಗೂ ಸಂಘ-ಸಂಸ್ಥೆಗಳು ನಡೆಸಿದ ರಾಲಿಯಲ್ಲಿ ಭಾಗವಹಿಸಿ ಸರ್ಕಾರದ ಕೃಷಿ ನೀತಿಯನ್ನು ಖಂಡಿಸಿದರು. ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಇನ್ನುಳಿದವರು ಕೇವಲ ಪ್ರತಿಮೆ ಮುಂದೆ ಕುಳಿತು ಅಧಿವೇಶನಕ್ಕೆ ಹಿಂದಿರುಗಿದರು.

ರಾಜ್ಯಾದ್ಯಂತ ರೈತ ಸಂಘಟನೆಗಳು, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ವ್ಯಕ್ತಪಡಿಸಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದವು.

error: Content is protected !!