ದಾವಣಗೆರೆ, ಡಿ. 7 – ನಗರಕ್ಕೆ ಕುಡಿಯುವ ನೀರು ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಕುಂದುವಾಡ ಕೆರೆ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಬಳಲುತ್ತಿದೆ.
ದಂಡೆಯ ಮೇಲೆ ಪೊದೆಗಳು ಬೆಳೆಯುತ್ತಿದ್ದರೆ, ಸಮಯ ಮೀರಿ ಬರುವವರನ್ನು ನಿಯಂತ್ರಿಸುವವರು ಇಲ್ಲದಂತಾಗಿದೆ. ಸಂಜೆ ನಂತರ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ವಾಯುವಿಹಾರಕ್ಕೆ ಬರುವವರಿಗೆ ಶೌಚಾಲಯದ ವ್ಯವಸ್ಥೆಯ ಕೊರತೆಯೂ ಕಾಡುತ್ತಿದೆ.
ಕೆರೆ ದಂಡೆಯ ಮೇಲೆ ಸಮೃದ್ಧವಾಗಿ ಹುಲ್ಲು ಹಾಗೂ ಪೊದೆಗಳು ಬೆಳೆದು ನಿಂತಿವೆ. ದಂಡೆಯ ಮೇಲೆ ಕೆಲವೆಡೆ ಪೊದೆಗಳು ಮರಗಳನ್ನು ನಾಚಿಸುವಂತೆ ಬೆಳೆಯುತ್ತಿವೆ. ಪೊದೆ ಕೆಲವೆಡೆ ಎಷ್ಟು ದಟ್ಟವಾಗಿವೆ ಎಂದರೆ ಕೆರೆಯನ್ನೇ ಮರೆ ಮಾಚುತ್ತಿದೆ.
ಪೊದೆಗಳಾಗಿರುವ ಗಿಡಗಳನ್ನು ಸವರಿ ಹಾಕದೇ ಹೋದರೆ ಅವುಗಳು ಇನ್ನಷ್ಟು ಬೆಳೆದು ದಂಡೆಯ ಕಲ್ಲುಗಳನ್ನೇ ಸಡಿಲ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ.
ಕುಂದುವಾಡ ಕೆರೆ ಪ್ರವೇಶಕ್ಕೆ ಬೆಳಿಗ್ಗೆ ಹಾಗೂ ಸಂಜೆ ಸಮಯ ನಿಗದಿ ಪಡಿಸಲಾಗಿದೆ. ಆದರೆ, ಈ ಅವಧಿಯನ್ನು ಮೀರಿಯೂ ಜನರು ಕೆರೆಯಲ್ಲಿ ವಿಹಾರ ನಡೆಸುತ್ತಿದ್ದಾರೆ. ಕೇವಲ ಮೂರ್ನಾಲ್ಕು ಸಿಬ್ಬಂದಿಯನ್ನು ಕೆರೆಗೆ ನಿಯೋಜಿಸಲಾಗಿದೆ. ಜನರ ವಿಹಾರಕ್ಕೆ ಅವಕಾಶ ಇರುವ ಸುಮಾರು ಮೂರೂ ವರೆ ಕಿ.ಮೀ. ಉಸ್ತುವಾರಿ ಈ ಸಿಬ್ಬಂದಿ ಸಾಲದಂತಾಗಿದೆ.
ಸಂಜೆಯಾದ ನಂತರ ಅನೈತಿಕ ಚಟುವಟಿಕೆ ಗಳಿಗೆ ಕೆರೆ ಆಶ್ರಯವಾದಂತಾಗಿದೆ. ಕೆರೆ ದಂಡೆಯ ಬಳಿಯಲ್ಲಿ ಮದ್ಯ ಸೇವನೆಯೂ ನಡೆಯುತ್ತಿದೆ.
ಕೆರೆ ಸುಂದರವಾಗಿ ಕಾಣಲೆಂದು ಕಾರಂಜಿಗಳನ್ನು ಅಳವಡಿಸಲಾಗಿದೆ. ಆದರೆ, ಆ ಕಾರಂಜಿ ಸೂಕ್ತವಾಗಿ ಕೆಲಸ ಮಾಡುತ್ತಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿಯೂ ಕಾರಂಜಿಯ ಪ್ರಯೋಜನಕ್ಕೆ ಬರುತ್ತಿಲ್ಲ.
ಕೆರೆ ಆವರಣದ ಒಳಗೆ, ಹೊರಗೆ ಪ್ರವೇಶದ ಬಳಿ ಮತ್ತು ಪ್ರವೇಶದ ಸಮೀಪ ಮೂರು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಸ್ಮಾರ್ಟ್ ಸಿಟಿಯ ಶೌಚಾಲಯವೂ ಸೇರಿದೆ. ಆದರೆ, ಮೂರೂ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿವೆ.
ಸುಂದರವಾದ ಕೆರೆ ನಿರ್ಮಾಣವಾಗಿದ್ದರೂ ನಿರ್ವಹಣೆಯ ಕೊರತೆ ಕಾಡುತ್ತಿದೆ. ಈ ಬಗ್ಗೆ ಪಾಲಿಕೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.
- ಕುಂದುವಾಡ ಕೆರೆ ದಂಡೆಯಲ್ಲಿ ಕೆರೆಯನ್ನೇ ಮರೆ ಮಾಚುವಂತೆ ಬೆಳೆದಿರುವ ಗಿಡ ಗಂಟಿಗಳು.
- ಆರಂಭಿಕ ದಿನಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಿ, ಇತ್ತೀಚೆಗೆ ಸಮರ್ಪಕವಾಗಿ ಬಳಕೆಯಾಗದ ಕೆರೆಯಲ್ಲಿರುವ ಕಾರಂಜಿಗಳು.
- ಕೆರೆಯ ಹೊರ ಭಾಗದಲ್ಲಿರುವ ಮಹಾನಗರ ಪಾಲಿಕೆಯಿಂದ ನಿರ್ಮಿಸಲ್ಪಟ್ಟ ಶೌಚಾಲಯ.