ರಾಣೇಬೆನ್ನೂರು, ಡಿ.5- ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ರೈತರ ಭೂಮಿ ಯನ್ನು ಬಲತ್ಕಾರದಿಂದ ಕಿತ್ತುಕೊಳ್ಳುತ್ತಿರುವ ನೀತಿಯನ್ನು ಖಂಡಿಸಿ ಹೋರಾಡುತ್ತಿರುವ ಬಿ.ಡಿ. ಹಿರೇಮಠ ಅವರ ಸತ್ಯಾಗ್ರಹಕ್ಕೆ ರಾಜ್ಯ ರೈತ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಶಿಕಾರಿಪುರ ತಾಲ್ಲೂಕಿನ ಉಡಗುಣಿ, ತಾಳಗುಂದ, ಹೊಸೂರು ಮುಂತಾದ ಗ್ರಾಮ ಗಳ ಕೆರೆಗಳಿಗೆ ಸರಕಾರ ನೀರು ತುಂಬಿಸುವ ಉದ್ದೇಶದಿಂದ ರೈತರ ಭೂಮಿಯನ್ನು ಬಲತ್ಕಾರದಿಂದ ಕಿತ್ತುಕೊಳ್ಳುತ್ತಿರುವ ನೀತಿ ಖಂಡಿಸಿ ಹಿರಿಯ ಹೋರಾಟಗಾರ ಬಿ.ಡಿ. ಹಿರೇಮಠ ಅವರು ಮೂರು ದಿನಗಳಿಂದ ರಟ್ಟಿಹಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುವುದಾಗಿ ಮತ್ತು ಬಲತ್ಕಾರದ ರೈತ ವಿರೋಧಿ ನೀತಿಯನ್ನು ಸರಕಾರ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ನಗರದ ಬಸ್‌ಸ್ಟ್ಯಾಂಡ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಪ ತಹಸೀಲ್ದಾರ್ ಹಾದಿಮನಿ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಪತ್ರ ಅರ್ಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಮೇಲ್ಕಂಡ ನೀರಾವರಿ ಯೋಜನೆಗೆ ಹಾವೇರಿ ಜಿಲ್ಲೆಯ ನೂರಾರು ರೈತರ ಫಲವತ್ತಾದ ಭೂಮಿಯನ್ನು ರೈತರ ವಿರೋಧದ ಮಧ್ಯ ಕಸಿದುಕೊಳ್ಳಲಾಗುತ್ತಿದೆ. ಸರ್ಕಾರದ ಈ ನೀಚ ರೈತ ವಿರೋಧಿ ನೀತಿಯನ್ನು ಖಂಡಿಸಿ, ಹಿರಿಯ ಹೋರಾಟಗಾರ ಬಿ.ಡಿ.ಹಿರೇಮಠ ಅವರು ಮೂರು ದಿನಗಳಿಂದ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಉತ್ತರ
ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರಿನಿಂದ ಎಲ್ಲಾ ರೈತಪರ, ಕನ್ನಡಪರ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದರು.
25 ವರ್ಷಗಳ ಹಿಂದೆಯೇ ಅಪ್ಪರ್ ತುಂಗಾ ಯೋಜನೆಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಬರಬೇಕಾದ ಪರಿಹಾರವೇ ಇನ್ನೂ ಬಂದಿಲ್ಲ. ಅಂತಹದ್ದರಲ್ಲಿ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ರವೀಂದ್ರಗೌಡ ಪಾಟೀಲ, ರೈತರಿಗೆ ಮಾರಕವಾಗಿರುವ ಈ ನೀತಿ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಚಂದ್ರಣ್ಣ ಬೇಡರ, ಹರಿಹರ ಗೌಡ ಪಾಟೀಲ, ಬಿ.ಕೆ. ರಾಜನಹಳ್ಳಿ, ಶಿವಾನಂದ ಬುಳ್ಳಮ್ಮನವರ, ಮಹಮದ್ ಸಾಬ್, ಶಿದ್ದಪ್ಪ ತಿರುಕಪ್ಪ, ಕೆ.ಎಚ್. ಕೂಲೇರ, ಶಿವಣ್ಣ ದೊಡ್ಮನಿ, ಮಂಜುನಾಥ ದುಗ್ಗತ್ತಿ, ಪ್ರದೀಪ ಅಕ್ಕೇರ, ಧರ್ಮಣ್ಣ ಕುಪ್ಪೇಲೂರ, ಎಸ್.ಡಿ. ಹೊನ್ನಕ್ಕಳವರ, ರಾಜು ಓಲೇಕಾರ, ಸಂತೋಷ ಬಮ್ಮಕ್ಕನವರ, ಹಾಲವ್ವ ಬಮ್ಮಕ್ಕನವರ, ಸಂತೋಷ ವಡ್ಡರ ನಾಗರಾಜ ಓಲೇಕಾರ ಮೊದಲಾದವರು ಇದ್ದರು.