ರಾಣೇಬೆನ್ನೂರು ನಗರಸಭೆಯ ಪ್ರಥಮ ಸಭೆ

ಆಡಳಿತಾತ್ಮಕ ಮಂಜೂರಾತಿಗೆ ಮೀಸಲು

ರಾಣೇಬೆನ್ನೂರು, ಡಿ.5-  ಎರಡು ವರ್ಷಗಳ ನಂತರ ಆಡಳಿತದ ಚುಕ್ಕಾಣಿ ಹಿಡಿದು ಅಧಿಕಾರ ವಹಿಸಿಕೊಂಡ ಬಿಜೆಪಿಯ ರೂಪಾ ಚಿನ್ನಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ  ನಗರಸಭೆಯ ಪ್ರಥಮ  ಸಭೆ ಇಂದು ನಡೆದು ಸುಮಾರು 6 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪತ್ರಿಕೆಗಳಿಗೆ ಮಂಜೂರಾತಿ ಪಡೆಯಲಾಯಿತು.

ನಗರದ ವಿವಿಧ ವಿಭಾಗಗಳಲ್ಲಿ ರಸ್ತೆ, ಗಟಾರ, ಡಾಂಬರೀಕರಣ, ಆರ್‌ಸಿಸಿ, ಸ್ಲ್ಯಾಬ್, ಸಿಡಿ, ಕಾಂಕ್ರೀಟ್ ರಸ್ತೆ, ಬೀದಿ ದೀಪ ಅಳವಡಿಕೆ ಮುಂ ತಾದ ಕಾಮಗಾರಿಗಳಿಗೆ ತಯಾರಿಸಲಾದ ಅಂ ದಾಜು ಪತ್ರಿಕೆಗಳ ಮಂಜೂರಾತಿಗೆ ಸದಸ್ಯರಾದ ರಾಜು ಅಡ್ಮನಿ, ಹನುಮಂತಪ್ಪ ಹೆದ್ದೇರಿ, ಪ್ರಕಾಶ ಬುರುಡಿಕಟ್ಟಿ, ಪ್ರಕಾಶ ಪೂಜಾರ, ಮಲ್ಲಣ್ಣ ಅಂಗಡಿ ಮುಂತಾದವರ ಸೂಚನೆಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಶಾಸಕರ ವಿಶೇಷ ಅನುದಾನದ ಕಾಮಗಾರಿ ಸೇರಿದಂತೆ,  ನಗರಸಭೆಯಿಂದ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಆಯಾ ವಿಭಾಗಗಳ ಸದಸ್ಯರ ಗಮನಕ್ಕೆ ತರದ ಬಿಜೆಪಿ ಆಡಳಿತದ ಬಗ್ಗೆ ಕಾಂಗ್ರೆಸ್ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿ ಬಸೇನಾಯ್ಕ, ಶೇಖಪ್ಪ ಹೊಸಗೌಡ್ರ, ನಿಂಗಪ್ಪ ಕೋಡಿಹಳ್ಳಿ ಇನ್ನಿತರರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಗಂಗಮ್ಮ ಹಾವನೂರ, ಕವಿತಾ ಹೆದ್ದೇರಿ, ಹುಚ್ಚಪ್ಪ ಮೆಡ್ಲೇರಿ, ಮಂಜುಳಾ ಹತ್ತಿ, ಪಾಂಡುರಂಗ ಗಂಗಾವತಿ, ರತ್ನವ್ವ ಪೂಜಾರ,  ಸಿದ್ದಪ್ಪ ಬಾಗಿಲದವರ, ಆರಿಫ್ ಖಾನಂ ಸೌದಾಗರ, ರಾಮಪ್ಪ ಕರಡೆಣ್ಣನವರ, ನೂರುಲ್ಲಾ ಖಾಜಿ, ಗುರುರಾಜ ತಿಳವಳ್ಳಿ ಸೇರಿದಂತೆ 11 ಸದಸ್ಯರನ್ನೊಳಗೊಂಡ ಸ್ಥಾಯಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಿಗೆ ಹೊಸ ಕಾರು ತರುವ, ನ್ಯಾಯವಾದಿಗಳ ನೇಮಿಸುವ  ಮತ್ತು ಕಾಮಗಾರಿ ಮುಕ್ತಾಯ ಪ್ರಮಾಣ ಪತ್ರ ಕೊಡುವ ಮುಂತಾದವು ಸೇರಿ 61 ವಿಷಯಗಳು ಸರ್ವಾನುಮತದಿಂದ ನಿರ್ಣಯಗೊಂಡವು.

ಶಾಸಕ ಅರುಣಕುಮಾರ ಪೂಜಾರ, ಉಪಾ ಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ ವೇದಿಕೆಯಲ್ಲಿದ್ದರು. ಪೌರಾಯುಕ್ತ ಡಾ. ಮಹಾಂತೇಶ  ಮೊದಲಿಗೆ ಸ್ವಾಗತಿಸಿ ವಂದಿಸಿದರು. ಮೇನೇಜರ್ ಶಂಕರ್‌,  ಎಂ. ಎಚ್. ಪಾಟೀಲ, ಮಧು ತಡಕನಹಳ್ಳಿ ಸಭಾ ಕಲಾಪ ನಡೆಸಿದರು.

error: Content is protected !!