ದಾವಣಗೆರೆ, ಡಿ.5- ಸಂಪೂರ್ಣ ಶ್ರಮಿಕ ಸಮಾಜವೆನಿಸಿರುವ ನದಾಫ್ – ಪಿಂಜಾರ್ ಸಮಾಜಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದು ಹಾಗೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ಜಿಲ್ಲಾ ಮತ್ತು ನಗರ ಘಟಕದಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಪೂರ್ಣ ಆರ್ಥಿಕ ಅಸಮಾನತೆಯಿಂದ ಅತ್ಯಂತ ದುಸ್ಥಿತಿಯಲ್ಲಿದ್ದರೂ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅತೀ ಹಿಂದುಳಿದ ಸಮಾಜವೆನಿಸಿದ್ದರೂ ಆಳುವ ಸರ್ಕಾರಗಳ ಕೃಪೆಗೆ ಪಾತ್ರವಾಗದೇ ಇರುವುದು ವಿಷಾದನೀಯ. ಸರ್ಕಾರದ ಆದೇಶ ಸಂಖ್ಯೆ ಸ.ಕ.ಇ. 150 ಬಿ.ಸಿ.ಎ., 94 ದಿನಾಂಕ 17-09-1994ರ ಆದೇಶದಂತೆ ಪ್ರವರ್ಗ-1ರಡಿಯಲ್ಲಿ ಜಾತಿ ಸೂಚಕ ಪ್ರಮಾಣ ಪತ್ರ ಹಾಗೂ ಆದಾಯ ದೃಢೀಕರಣ ಪತ್ರ ನೀಡುವಲ್ಲಿ ತೊಂದರೆಯನ್ನು ಅನುಭವಿಸಬೇಕಿದೆ. ಈ ವ್ಯತ್ಯಾಸದಿಂದ ಸಮಾಜದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ನಮ್ಮ ಸಮಾಜ ಅಭಿವೃದ್ಧಿಯಾಗಲು ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರೆ ತನ್ಮೂಲಕ ಸಮಾಜ ಅಭಿವೃದ್ಧಿಯ ಪಥದತ್ತ ಸಾಗಲು ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪ್ರಮುಖ ಬೇಡಿಕೆಗಳು: ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ, ಸ್ವಯಂ ಉದ್ಯೋಗಕ್ಕಾಗಿ ಸಬ್ಸಿಡಿ ಸಹಿತ ಸಾಲ, ಹಾಸಿಗೆ, ದಿಂಬು ಇತ್ಯಾದಿ ಯಂತ್ರ ಸಾಮಗ್ರಿಗಳನ್ನು ಸರ್ಕಾರ ಉಚಿತವಾಗಿ ನೀಡುವುದು, ಹತ್ತಿಯನ್ನು ರಿಯಾಯಿತಿ ದರದಲ್ಲಿ ಒದಗಿಸುವುದು, ಬಡವರಿಗೆ ಆಶ್ರಯ ಮನೆಗಳನ್ನು ನೀಡುವುದು, ಕುಶಲಕರ್ಮಿಗಳನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ ಸೌಲಭ್ಯಗಳನ್ನು ಒದಗಿಸುವುದು, ಇ.ಎಸ್.ಐ ಸೌಲಭ್ಯವನ್ನು ಒದಗಿಸುವುದು, ಉನ್ನತ ಶಿಕ್ಷಣ ಅಂದರೆ ವೈದ್ಯಕೀಯ, ತಾಂತ್ರಿಕ ಶಿಕ್ಷಣ ಪಡೆಯಲು ಸರ್ಕಾರ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವುದು ಸೇರಿದಂತೆ, ವಿವಿಧ
ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಜೆ.ಹೆಚ್. ಉಕ್ಕಡಗಾತ್ರಿ, ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಎ.ಆರ್. ಅನ್ವರ್ ಹುಸೇನ್, ಉಪಾಧ್ಯಕ್ಷ ಮಹ್ಮದ್ ಅಲಿ, ವಿಭಾಗೀಯ ಉಪಾಧ್ಯಕ್ಷ ಡಿ.ಬಿ.ಹಸನ್‍ಪೀರ್, ಎ.ಫಕೃದ್ಧೀನ್, ಶೌಕತ್ ಅಲಿ ಮತ್ತಿತರರು ಉಪಸ್ಥಿತರಿದ್ದರು.