ದಾವಣಗೆರೆ, ಡಿ.6- ಇಲ್ಲಿನ ಸುರ್ ತಾಲ್ ಸಂಗೀತ ಕಲಾ ಸಂಘದ ವತಿಯಿಂದ ಕಾರ್ತಿಕ ಮಾಸದ ಸಂಗೀತ ಉತ್ಸವವು ನೆರೆದಿದ್ದ ಕಲಾರಸಿಕರ ಮನತಣಿಸಿತಲ್ಲದೇ, ಸಂಗೀತದ ರಸದೌತಣವನ್ನು ಉಣಬಡಿಸಿತು.
ನಗರದ ರೋಟರಿ ಬಾಲಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಈ ಉತ್ಸವದಲ್ಲಿ ಬೆಂಗಳೂರಿನ ಕಲಾವಿದ ಎಂ.ಎಸ್. ಪ್ರದೀಪ್ ಕುಮಾರ್ ಅವರ ಸಿತಾರ್ ವಾದನ ಕಲಾ ಪ್ರತಿಭೆಯ ಪ್ರದರ್ಶನವನ್ನು ಕಲಾರಸಿಕರು ಆನಂದಿಸುತ್ತಾ ಮನಸೋತರು. ಅಲ್ಲದೇ, ಚಪ್ಪಾಳೆಯ ಮುಖಾಂತರ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಬುರಗಿಯ ಕಲಾವಿದ ರವಿ ಆಳಂದ ಅವರ ಹಿಂದೂಸ್ತಾನಿ ಗಾಯನ ಸಹ ಮನಮುಟ್ಟಿತು.
ಈ ಸಂಗೀತಕ್ಕೆ ಕೊಪ್ಪಳದ ಸುರೇಶ ಹಡಪದ್, ದಾವಣಗೆರೆಯ ರಾಘವೇಂದ್ರ ಸಾರಂಗ್ ತಬಲಾ ಸಾಥಿಗಳಾಗಿ ಮೆರಗು ನೀಡಿದರು.
ಇದೇ ವೇಳೆ ಕಲಾ ಸೇವಕ ಲಲಿತ ಕುಮಾರ ಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಲಿಂಗೇಶ್ವರ ಸಂಗೀತ ಕಲಾ ಸಂಘವು ಸಹಕಾರ ನೀಡಿತ್ತು.