ರಂಭಾಪುರಿ ಪೀಠ (ಬಾಳೆಹೊನ್ನೂರು), ಡಿ.6- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಪ್ರಥಮ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಅವರು ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಇಂದು ಭೇಟಿ ನೀಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಮತ್ತು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿ ಡಾ. ವೀರಸೋಮೇಶ್ವರ ಜಗದ್ಗುರು ಅವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಪರಮಶಿವಯ್ಯ ಅವರನ್ನುದ್ದೇಶಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, `ನಿಮ್ಮ ನಾಯಕತ್ವದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಅತ್ಯುತ್ತಮ ಕಾರ್ಯಗಳು ಜರುಗುತ್ತವೆ ಎಂಬ ನಂಬಿಕೆಯಿದೆ. ವೀರಶೈವ ಲಿಂಗಾಯತ ಸಮುದಾಯದ ಐಕ್ಯತೆ, ಒಳ ಜಾತಿಗಳ ಸಂಘರ್ಷ ನಿಂತು ಸಾಮರಸ್ಯದಿಂದ ಸಮಾಜ ಸದೃಢಗೊಳ್ಳಲಿ’ ಎಂದು ಶುಭ ಹಾರೈಸಿ ಶಾಲು, ಫಲ-ಪುಷ್ಪವಿತ್ತು ಆಶೀರ್ವದಿಸಿದರು.