ಜಗಳೂರು : ರೈತ ವಿರೋಧಿ ನೀತಿಗಳನ್ನು ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಜಗಳೂರು, ಡಿ.4- ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕ ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ   ರೈತ ಮುಖಂಡರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಪಿಎಂಸಿ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ, 2019ರ ಬೀಜ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತರಿಗೆ ಮರಣ ಶಾಸನಗಳಾಗಿದ್ದು, ರೈತರಿಗೆ ಮಾರಕವಾಗಿರುವ ಈ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಬಾರಿ ತಾಲ್ಲೂಕು ಅತಿವೃಷ್ಟಿ ಪ್ರದೇಶವೆಂದು ಘೋಷಣೆಯಾಗಿದ್ದು, ಸಕಾಲದಲ್ಲಿ ರೈತರಿಗೆ ನಷ್ಟಕ್ಕನುಗುಣವಾಗಿ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಮೆಕ್ಕೆಜೋಳವನ್ನು ಇದೀಗ ಮಾರುಕಟ್ಟೆಯಲ್ಲಿ 1,300 ರೂ.ಗೆ ಖರೀದಿ ಮಾಡುತ್ತಿದ್ದು, ರೈತರು ನಷ್ಟವನ್ನು ಅನುಭವಿಸುವಂತಾಗಿ ಸಾಲಗಾರರಾಗುವಂತಾಗಿದೆ. ಮಕ್ಕೆಜೋಳಕ್ಕೆ ಕನಿಷ್ಠ 3,500 ರೂ. ಹಾಗೂ ಶೇಂಗಾಗೆ 10 ಸಾವಿರ ರೂ.ಗಳನ್ನು ನಿಗದಿಗೊಳಿಸಿ, ಸರಿಯಾದ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ  ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿದರು. ಆಡಳಿತ ಸರ್ಕಾರ ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕಿ, ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಖಂಡಿಸಿದರು.  ಸರ್ಕಾರ ರೈತಪರ ಕಾಳಜಿ ಹೊಂದಿದ್ದು, ಶೀಘ್ರವೇ ಮೆಕ್ಕೆಜೋಳ ಕೇಂದ್ರ ತೆರೆಯಲು ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕರು ಭರವಸೆ ನೀಡಿದರು. 

ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲ್ಲೂಕು ಕಾರ್ಯದರ್ಶಿ ಲೋಕೇಶ್, ಶರಣಪ್ಪ, , ಮುಖಂಡರಾದ  ಪ್ರಹ್ಲಾದಪ್ಪ,  ಕೆಂಚಪ್ಪ,  ತಿಪ್ಪೇಸ್ವಾಮಿ,  ಚಿಕ್ಕಬನ್ನಿಹಟ್ಟಿ ವೀರೇಶ್, ಗುರುಮೂರ್ತಿ, ಸುಪುತ್ರಪ್ಪ, ಅಜ್ಜಪ್ಪ, ಹನುಮಂತಪ್ಪ, ಕುಮಾರ, ಮಂಜುನಾಥ, ರಂಗಪ್ಪ, ಶಾಂತಪ್ಪ ಇನ್ನಿತರರಿದ್ದರು.

error: Content is protected !!