ಭೂತಕನ್ನಡಿ ಹಿಡಿದು ಕಾಂಗ್ರೆಸ್ ಹುಡುಕಬೇಕಿದೆ

ದಾವಣಗೆರೆ, ಡಿ. 4 – ರಾಜ್ಯದಲ್ಲಿ ಈಗ ಕಾಂಗ್ರೆಸ್ ಇಲ್ಲ, ಜೆಡಿಎಸ್ ಎಲ್ಲಿದೆ ಎಂದು ಹುಡುಕಬೇಕಿದೆ. ಈಗಷ್ಟೇ ಅಲ್ಲದೇ ಮುಂದಿನ 20-30 ವರ್ಷಗಳವರೆಗೆ ಬಿಜೆಪಿಯೇ ಇರಲಿದೆ ಎಂದಿರುವ ಬಿಜೆಪಿ ನಾಯಕ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ ಬದುಕಿದೆ ಎಂದು ತೋರಿಸಲು ಅದರ ನಾಯಕರು ಪ್ರಯತ್ನ ಪಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಗ್ರಾಮ ಪಂಚಾಯ್ತಿ ಚುನಾವಣೆಗಳ ಹಿನ್ನೆಲೆಯಲ್ಲಿ ನಗರದ ಜಿಎಂಐಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ 192 ಗ್ರಾಮ ಪಂಚಾಯ್ತಿಗಳಲ್ಲಿ ಶೇ.80ರಲ್ಲಿ ಗೆಲ್ಲಲು ಬಿಜೆಪಿಗೆ ಅವಕಾಶ ಇದೆ. ಈ ಗೆಲುವು ವಿಧಾನಸಭಾ ಚುನಾವಣೆಗೆ ಬುನಾದಿಯೂ ಆಗಲಿದೆ ಎಂದಿದ್ದಾರೆ.

ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಲೆಕ್ಕವೇ ಇಲ್ಲದಂತಾಗಿದೆ. ಕಾಂಗ್ರೆಸ್ ಎಲ್ಲಿದೆ ಎಂದು ಭೂತಕನ್ನಡಿ ಹಿಡಿದು ಹುಡುಕಬೇಕಿದೆ. ಆದರೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷ ಬದುಕಿದೆ ಎಂದು ತೋರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಶಿರ ಹಾಗೂ ಆರ್.ಆರ್. ನಗರ ಉಪ ಚುನಾವಣೆಗಳು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು  ಶಿವಕುಮಾರ್ ಹೇಳಿದ್ದರು. ರಾಜ್ಯದ ಜನತೆ ಈಗಾಗಲೇ ದಿಕ್ಸೂಚಿ ತೋರಿಸಿದ್ದು, ಮುಂದಿನ ಬಾರಿಯೂ ಬಿಜೆಪಿ ಬೇಕು ಎಂದು ತಿಳಿಸಿದ್ದಾರೆ ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಗೆಲ್ಲಬೇಕಿದೆ. ಗ್ರಾಮೀಣ ಭಾಗಗಳಿಗೆ ನೀರು, ವಿದ್ಯುತ್, ರಸ್ತೆ, ಚರಂಡಿ, ಆರೋಗ್ಯ, ಕೆರೆ – ಕಟ್ಟೆಗಳ ಅಭಿವೃದ್ಧಿಯಂತಹ ಮೂಲಭೂತ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಬೇಕಿದೆ. ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೆ ಬಿಜೆಪಿ ಇರಬೇಕಿದೆ. ಈ ಚುನಾವಣೆಗಳನ್ನು ಹಗುರವಾಗಿ ಭಾವಿಸಬಾರದು ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳ ಕೊಡುಗೆ ಶೂನ್ಯವಾಗಿದ್ದು, ಲೂಟಿಯೇ ಅವರ ಸಾಧನೆಯಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಶಾಸಕ ಎಸ್.ಎ. ರವೀಂದ್ರನಾಥ್, ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆದ ಶಾಸಕ ಎಸ್.ವಿ. ರಾಮಚಂದ್ರ, ಲಿಡ್ಕರ್‌  ಅಧ್ಯಕ್ಷರೂ ಆದ ಶಾಸಕ ಪ್ರೊ. ಲಿಂಗಣ್ಣ, ಮೇಯರ್ ಅಜಯ್ ಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಬಸವರಾಜನಾಯ್ಕ, ಪಕ್ಷದ ಮುಖಂಡರಾದ ಸುಧಾ ಜಯರುದ್ರೇಶ್, ಎಂ.ಬಿ. ನಂದೀಶ್, ತುಳಸಿ ಮುನಿರಾಜ ಗೌಡ, ಮತ್ತಿತರರು ಉಪಸ್ಥಿತರಿದ್ದರು.

ಸಹನಾ ಪ್ರಾರ್ಥಿಸಿದರು. ಬಿ.ಎಸ್. ಜಗದೀಶ್ ನಿರೂಪಿಸಿದರು.

error: Content is protected !!