ಕನ್ನಡ ಪದಗಳ ಬಳಕೆಯಲ್ಲಿ ಕಡೆಗಣನೆ : ಬಾಮ ತರಾಟೆ

ಬಿ.ಎಸ್. ಚನ್ನಬಸಪ್ಪ ಮತ್ತು ಮಕ್ಕಳ ಬಟ್ಟೆ ಅಂಗಡಿಯಲ್ಲಿ ಸ್ಥಳೀಯ ಸುಮಾರು ಐದಾರು ಸಾವಿರ ಜನರಿಗೆ ಉದ್ಯೋಗ ನೀಡುವುದರ ಮೂಲಕ ಸರೋಜಿನಿ ಮಹಿಷಿ ವರದಿಯನ್ನು ಸದ್ದಿಲ್ಲದೇ ಜಾರಿಗೆ ತಂದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ದಾವಣಗೆರೆ, ಡಿ.3- ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ನಮ್ಮಲ್ಲಿನ ಪ್ರತಿಷ್ಠಿತ ಮನೋಭಾವ ಹೊಂದಿರುವ ಕನ್ನಡಿಗರಿಂದಲೇ ಅಡ್ಡಿಯಾಗುತ್ತಿದೆಯೇ ವಿನಃ ಮರಾಠಿಗರು, ತಮಿಳರಿಂದಲ್ಲ ಎಂದು ಹಿರಿಯ ಸಾಹಿತಿ – ಪತ್ರಕರ್ತ ಬಾ.ಮ. ಬಸವರಾಜಯ್ಯ ವ್ಯಾಕುಲತೆ ವ್ಯಕ್ತಪಡಿಸಿದರು.

ನಗರದ ಹೆಸರಾಂತ ಜವಳಿ ಉದ್ಯಮಿ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಜೆ.ಹೆಚ್.ಪಟೇಲ್ ರಸ್ತೆಯಲ್ಲಿರುವ ಬಿಎಸ್‌ಸಿ ಎಕ್‌ಕ್ಲೂಸಿವ್ ಶೋರೂಂ ಮಳಿಗೆ ಆವರಣದಲ್ಲಿ ನಿನ್ನ ಏರ್ಪಾಡಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.

24×7 ದೃಶ್ಯ ಮಾಧ್ಯಮಗಳ ಹಾವಳಿಯು ಕನ್ನಡ ಭಾಷೆಯ ಬೆಳವಣಿಗೆಗೆ ಕಂಟಕವಾಗಿವೆ. ಇಲ್ಲಿರುವ ಬಹುತೇಕ ನಿರೂಪಕರು ತಮ್ಮ ಪ್ರತಿಷ್ಠೆಯನ್ನು ತೋರ್ಪಡಿಸುವ ಭರದಲ್ಲಿ ಅನ್ಯ ಭಾಷೆಯ ಪದಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ತಿಣಿಕಿ ತಿಣಿಕಿ ಒಂದೊಂದು ಕನ್ನಡ ಪದ ಉದುರಿಸುತ್ತಾರೆ ಎಂದು ಅವರು ಕಿಡಿ ಕಾರಿದರು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಪದಗಳನ್ನು ನುಂಗಿ ಹಾಕಿ ಬರೀ ಅನ್ಯ ಭಾಷೆಯ ಪದಗಳನ್ನು ತುರುಕುತ್ತಿರುವುದರ ಮೂಲಕ ಕನ್ನಡಕ್ಕೆ ಕುತ್ತು ತರುತ್ತಿರುವ ದೃಶ್ಯ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಮ ಆಗ್ರಹಿಸಿದರಲ್ಲದೇ, ಕನ್ನಡಪರ ಹೋರಾಟಗಾರರು, ಕನ್ನಡ ಸಂಘ-ಸಂಸ್ಥೆಗಳು ಒಟ್ಟಾಗಿ ಚಳುವಳಿ ನಡೆಸಬೇಕಾದ ಅಗತ್ಯತೆ ಇದೆ ಎಂದು ಕರೆ ನೀಡಿದರು.

ಸದ್ದಿಲ್ಲದ ಸೇವೆ : ಕರ್ನಾಟಕದಲ್ಲಿ ಸರ್ಕಾರ ಮತ್ತು ಉದ್ಯಮಗಳಿಗೆ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಸದುದ್ದೇಶ ಹೊಂದಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು ಎಂದು ಸುಮಾರು 40 ವರ್ಷಗಳಿಂದ ಬರೀ ಭಾಷಣದಲ್ಲಿ ಒತ್ತಾಯ ಕೇಳಿ ಬರುತ್ತಿದೆ. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಇನ್ನೂ ಜಾರಿಗೆ ಬರದಿರುವುದು ಕನ್ನಡಗರಿಗೆ ಮಾಡುತ್ತಿರುವ ವಂಚನೆ ಎಂದು ಬಾಮ ತರಾಟೆಗೆ ತೆಗೆದುಕೊಂಡರು. ಜವಳಿ ಉದ್ಯಮಕ್ಕೆ ರಾಜ್ಯದಲ್ಲೇ ಹೆಸರಾಗಿರುವ ನಗರದ ಬಿ.ಎಸ್. ಚನ್ನಬಸಪ್ಪ ಮತ್ತು ಮಕ್ಕಳ ಬಟ್ಟೆ ಅಂಗಡಿಯಲ್ಲಿ ಸ್ಥಳೀಯ ಸುಮಾರು ಐದಾರು ಸಾವಿರ ಜನರಿಗೆ ಉದ್ಯೋಗ ನೀಡುವುದರ ಮೂಲಕ ಸರೋಜಿನಿ ಮಹಿಷಿ ವರದಿಯನ್ನು ಸದ್ದಿಲ್ಲದೇ ಜಾರಿಗೆ ತಂದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ ಎಂದು ಬಾಮ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿ.ಎಸ್. ಚನ್ನಬಸಪ್ಪ ಮತ್ತು ಮಕ್ಕಳ ಬಟ್ಟೆ ಅಂಗಡಿಯಂತಹ ಕೆಲವು ಉದ್ಯಮಗಳು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಆದ್ಯತೆ ನೀಡುವ ಮುಂಚೂಣಿಯಲ್ಲಿದ್ದು, ಅಂತಹ ಉದ್ಯಮಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನಾದರೂ ಸರ್ಕಾರ ಮಾಡಲಿ ಎಂದು ಬಾಮ ಒತ್ತಾಯಿಸಿದರು.

ಮತ್ತೋರ್ವ ಸನ್ಮಾನಿತರಾಗಿದ್ದ ಕನ್ನಡಪರ ಹೋರಾಟಗಾರ ಬಂಕಾಪುರದ ಚನ್ನಬಸಪ್ಪ ಮಾತನಾಡಿ, ಕನ್ನಡ ಭಾಷೆಯ ಅಳಿವು – ಉಳಿವು ಕುರಿತಂತೆ ನಡೆದ ಪ್ರತಿಭಟನೆ, ಸತ್ಯಾಗ್ರಹ, ಜೈಲ್ ಭರೋ ಚಳುವಳಿಗಳನ್ನು ವಿವರಿಸಿದ್ದಲ್ಲದೇ, ಇಷ್ಟಾದರೂ ಅನ್ಯ ಭಾಷೆಗಳನ್ನು ಮಾತನಾಡುವ ಪ್ರತಿಷ್ಠಿ ತರಿಂದ ಕನ್ನಡ ಅವಸಾನದತ್ತ ಸಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ, ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿಗಳೂ ಆದ ಪ್ರೊ. ಎಸ್.ಬಿ. ರಂಗನಾಥ್ ಮಾತನಾಡಿ, ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳ ಕಾರ್ಯ ಚಟುವಟಿಕೆಗಳು ಶ್ಲ್ಯಾಘನೀಯ ಎಂದರಲ್ಲದೇ, ಈ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ತಾವು ಉದ್ಯಮವನ್ನು ನಡೆಸುವುದರ ಜೊತೆ – ಜೊತೆಗೆ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡುತ್ತಿರುವ ಬಗ್ಗೆ ಬಾಮ ಬಸವರಾಜಯ್ಯ ವಿಷಯ ಪ್ರಸ್ತಾಪಿಸಿದಾಗ ತಮ್ಮಲ್ಲಿ ಮತ್ತಷ್ಟು ಪ್ರೇರಣೆ – ಸಂತಸ – ಸಂಭ್ರಮ ಮನೆ ಮಾಡಿತು ಎಂದು ಅವರು ತಿಳಿಸಿದರು.

ಸಂಸ್ಥೆಯ ಬಿ.ಎಸ್. ಮೃನಾಲ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

error: Content is protected !!