ದಾವಣಗೆರೆ, ಡಿ. 3- ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಮಹಿಳಾ ಸದಸ್ಯೆಯ ಮೇಲೆ ಹಲ್ಲೆ ನಡೆಸಿರುವ ಶಾಸಕ ಸಿದ್ದು ಸವದಿ ಮತ್ತವರ ಬೆಂಬಲಿಗರ ಗೂಂಡಾ ವರ್ತನೆಯನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಇಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.
ಮಹಾಲಿಂಗಪುರ ಪುರಸಭೆ ಮಹಿಳಾ ಸದಸ್ಯೆ ಚಾಂದಿನಿ ನಾಯಕ್ ಅವರು ಗರ್ಭವತಿಯಾಗಿದ್ದು, ಅವರ ಜೊತೆ ಅವರ ಪತಿ ನಾಗೇಶ್ ನಾಯಕ್ ಜೊತೆಯಲ್ಲಿದ್ದಾಗಲೇ ಶಾಸಕರು, ಮತ್ತವರ ಬೆಂಬಲಿ ಗರು ಗರ್ಭಿಣಿ ಎಂಬುದನ್ನು ನೋಡದೇ ಎಳೆದಾಡುವ ಮೂಲಕ ಅವರ ಮೇಲೆ ಗೂಂಡಾವರ್ತನೆ ತೋರಿದ್ದಾರೆ. ಇದರಿಂದ ಮಹಿಳಾ ಸದಸ್ಯೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ದೂರಿದ್ದಾರೆ.
ಹಾಡುಹಗಲೇ ಪುರಸಭೆ ಮಹಿಳಾ ಸದಸ್ಯೆಯೊಬ್ಬರ ಮೇಲೆ ಈ ರೀತಿ ಹಲ್ಲೆಯಾದರೆ, ಇನ್ನು ರಾಜ್ಯದ ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಏನಾಗಬೇಡ? ಈ ರಾಜ್ಯದಲ್ಲಿ ಪ್ರಜಾ ಸರ್ಕಾರವಿದೆಯೋ? ಗೂಂಡಾ ಸರ್ಕಾರ ಆಡಳಿತ ನಡೆಸುತ್ತಿಯೋ? ಎಂಬುದು ತಿಳಿಯಾದಾಗಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅನಿತಾಬಾಯಿ ಮಾಲತೇಶ್, ಶ್ರೀಮತಿ ಸುಷ್ಮಾ ಪಾಟೀಲ್, ಶ್ರೀಮತಿ ಕವಿತಾ ಚಂದ್ರಶೇಖರ್, ಶ್ರೀಮತಿ ಶುಭಮಂಗಳ, ಶ್ರೀಮತಿ ದ್ರಾಕ್ಷಾಯಣಮ್ಮ, ಶ್ರೀಮತಿ ಮಂಗಳಮ್ಮ, ಶ್ರೀಮತಿ ಮಂಜಮ್ಮ, ಶ್ರೀಮತಿ ರಾಜೇಶ್ವರಿ, ಶ್ರೀಮತಿ ಮಂಗಳಮ್ಮ, ಶ್ರೀಮತಿ ಉಮಾ ಕುಮಾರ್ ಮತ್ತಿತರರಿದ್ದರು.