ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ’

ಗುರುವು ಗುರುಬಲ ನೀಡುವವನು, ಅಂದರೆ ಐಶ್ವರ್ಯ, ಧನ, ಸಂಪತ್ತು, ಐಷಾರಾಮಿ ಎಂದೆಲ್ಲಾ ನಾವು ಏನು ಕರೆಯುತ್ತೇವೆಯೋ, ಅವುಗಳ ಕಾರಕ ಗ್ರಹ ಈ ಗುರು. ಹೀಗಾಗಿ ಗುರು ಸಂಚಾರ ಮಾಡುತ್ತಿದ್ದಾನೆ ಎಂದರೆ, ರಾಶಿಗಳ ಮೇಲೆ ತನ್ನದೇ ಆದ ಪ್ರಭಾವವನ್ನು ಈತ ಬೀರುತ್ತಾನೆ. ಗುರು ಆಯಕಟ್ಟಿನ ಸ್ಥಾನದಲ್ಲಿದ್ದರೆ, ಜಾತಕನಿಗೆ ಸಂಪತ್ತು ಮತ್ತು ಸಂತೋಷ ಹೆಚ್ಚಿಗೆ ದೊರೆಯುತ್ತದೆ. ಸಂಪತ್ತು ದೊರೆಯುವುದರ ಜೊತೆಗೆ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಅದೇ ರೀತಿ ಗುರುವಿನ ಸಂಚಾರವು ಕೆಲವರಿಗೆ ನಕಾರಾತ್ಮಕ ಪ್ರಭಾವವನ್ನು ಸಹ ನೀಡುತ್ತದೆ. ಇಂದು ನಾವು ಗುರು ಸಂಚಾರದಿಂದ ಪ್ರಯೋಜನವನ್ನು ಪಡೆಯುವ ರಾಶಿಗಳ ಕುರಿತಾಗಿ ಚರ್ಚಿಸುತ್ತೇವೆ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಮೇಷ ರಾಶಿ : ಈ ರಾಶಿಯವರಿಗೆ, ಗುರುವು  ದಶಮ ಸ್ಥಾನದಲ್ಲಿ, ಅಂದರೆ ಕರ್ಮ ಸ್ಥಾನದಲ್ಲಿರುವುದರಿಂದ, ಕಷ್ಟಕಾಲದಲ್ಲಿ ಸ್ನೇಹಿತರ ನೆರವು ದೊರೆಯಲಿದೆ.ಉದ್ಯಮದಲ್ಲಿ ಅಭಿವೃದ್ಧಿ, ಹಿಡಿದ ಕಾರ್ಯದಲ್ಲಿ ಯಶಸ್ಸು, ಮಡದಿ-ಮಕ್ಕಳಿಂದ ನೆಮ್ಮದಿ, ಹೋದಲ್ಲೆಲ್ಲಾ ರಾಜ ಮರ್ಯಾದೆ, ಹಾಗೂ ಹಣಕಾಸಿನ ಹರಿವು ಹೆಚ್ಚಿ, ಆರ್ಥಿಕ ಸಮಸ್ಯೆಯು ಬಗೆಹರಿಯಲಿದೆ. ಸಮಾಜದಲ್ಲಿ ಪ್ರತಿಷ್ಠೆ, ಗೌರವ ಲಭಿಸಲಿದೆ, ಆದರೆ ಮಕ್ಕಳ ಅನಿಶ್ಚಿತ ಭವಿಷ್ಯ ಅವರನ್ನು ಕಂಗೆಡಿಸಬಹುದು, ಅನುಭವಿಗಳಾದ ಹಿರಿಯರ ಆಣತಿಯಂತೆ ನಡೆಯುವುದು ಉತ್ತಮ ನಿರ್ಧಾರವಾಗಲಿದೆ. ಆತ್ಮವಿಶ್ವಾಸದೊಂದಿಗೆ ಮುನ್ನಡೆಯಿರಿ, ಅತಿಯಾದ ಮೋಜು ಮಸ್ತಿ, ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರೀತು.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniವೃಷಭ ರಾಶಿ : ಈ ರಾಶಿಯವರಿಗೆ ಗುರುವು ಒಂಭತ್ತನೇ ಮನೆಯಲ್ಲಿ, ಅಂದರೆ ಭಾಗ್ಯಸ್ಥಾನದಲ್ಲಿ ಬರುವವನಾಗಿ, ಉದ್ಯೋಗದಲ್ಲಿ ಮುಂಬಡ್ತಿ, ವೇತನದಲ್ಲಿ ಹೆಚ್ಚಳ, ರಾಜಕಾರಣಿಗಳಿಗೆ ಪಕ್ಷದಲ್ಲಿ ಉನ್ನತ ಸ್ಥಾನ-ಮಾನಗಳು ದೊರೆಯಲಿವೆ. ಮನೆಯಲ್ಲಿ ವಿಶೇಷ  ಹೋಮ-ಹವನ ಮತ್ತು ಮದುವೆ ಮೊದಲಾದ ಮಂಗಳ ಕಾರ್ಯಗಳು ನಡೆಯಲಿವೆ. ಬಂಧು ಪ್ರೇಮಿಯಾಗಿ ಅನೇಕರಿಗೆ ಆಶ್ರಯ ಕೊಡುವರು. ದೊಡ್ಡ ದೊಡ್ಡ ಕೆಲಸಗಳಿಗೆ  ವಿಶೇಷ ಪ್ರಯತ್ನ ಪಡುವರು. ಆದಾಯದ ಹೆಚ್ಚಿನ ಭಾಗ ದಾನ, ಧರ್ಮಗಳಿಗೆ ಮೀಸಲಾಗಿಡುವರು.ಆದರೆ ತಮ್ಮ ದೈನಂದಿನ ಪೂಜೆ ಪುನಸ್ಕಾರಗಳಲ್ಲಿ ಉದಾಸೀನತೆ ಕಂಡುಬರಲಿದೆ. ಗುರು-ಹಿರಿಯರಲ್ಲಿ ವಿಧೇಯತೆ ಮೂಡಲಿದೆ. ವಿದ್ಯಾರ್ಥಿಗಳಿಗಂತೂ ಅತ್ಯುತ್ತಮ ಭವಿಷ್ಯ ಕಾದಿದೆ. ಹೊಸಮನೆ ಖರೀದಿ ಯೋಗವಿದೆ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಮಿಥುನ ರಾಶಿ : ಈ ರಾಶಿಯವರಿಗೆ, ಗುರುಗ್ರಹವು ಅಷ್ಟಮ ಸ್ಥಾನದಲ್ಲಿ ಅಂದರೆ, ಶತ್ರುವಿನ ಸ್ಥಾನಕ್ಕೆ ಬರುವವನಾಗಿ, ಈ ರಾಶಿಯವರು ಸಾಮಾನ್ಯವಾಗಿ ತಮ್ಮ ವಂಶಕ್ಕೆ ವಿರುದ್ಧವಾದ ಕೆಲಸ ಮಾಡುವರು. ಯಾರೋ ಮಾಡಿದ ತಪ್ಪಿನಿಂದಾಗಿ ನೀವು ತಲೆದಂಡ ತೆರಬೇಕಾದೀತು. ಮಾಡುವ ಉದ್ಯೋಗದಲ್ಲಿ ನೀವು ಗುಲಾಮರಂತಿರಬೇಕಾದೀತು. ಅತಿಶಯ ಅಹಂಕಾರದಿಂದ ವಿವೇಚನೆ ಕಳೆದುಕೊಳ್ಳಬೇಕಾದೀತು. ಮಕ್ಕಳು ಪೋಷಕರಿಂದ ಕೆಲಕಾಲ ದೂರವಿರುವರು. ಅನಿರೀಕ್ಷಿತವಾಗಿ ರೋಗ-ರುಜಿನಗಳಿಂದ ಪೀಡಿತರಾಗಿ ಕಷ್ಟಪಡುವರು.ಪರಮಾಪ್ತರ ಅಗಲಿಕೆ ಅತೀವ ದುಃಖವನ್ನುಂಟು ಮಾಡಲಿದೆ. ಮತ್ತೊಬ್ಬರಿಗೆ ಕೊಟ್ಟ ಹಣ ಸಕಾಲದಲ್ಲಿ ಬರುವುದು  ಅನುಮಾನ. ಆದಾಯ ಕಡಿಮೆ, ಖರ್ಚು ಹೆಚ್ಚಾಗಲಿದೆ. ಬಂಧುಗಳೊಂದಿಗೆ ತೀವ್ರ ವಿರೋಧ ಕಂಡುಬರಬಹುದು. ಗುರು ಜಪ ಎಷ್ಟು ಸಾಧ್ಯವೋ ಅಷ್ಟುಮಾಡಿ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಕರ್ಕಾಟಕ ರಾಶಿ: ಗುರುಗ್ರಹವು ಈ ರಾಶಿಯವರಿಗೆ ಸಪ್ತಮ ಸ್ಥಾನದದಲ್ಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು. ಅರ್ಧಕ್ಕೆ ನಿಂತಿದ್ದ ವಿದ್ಯಾಭ್ಯಾಸ ಮತ್ತೆ ಮುಂದುವರೆಯಲಿದೆ. ನಿಮ್ಮ ಅನೇಕ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡು ಕೊಳ್ಳುವಿರಿ. ಆದಾಯದ ಮೂಲದಲ್ಲಿ ತೀವ್ರ ಹೆಚ್ಚಳ, ಗುರು-ಹಿರಿಯರಲ್ಲಿ ವಿಶೇಷ ಗೌರವ ತೋರುವಿರಿ. ಪರ ಸ್ತ್ರೀಯರ ವಿಚಾರದಲ್ಲಿ ಆಸಕ್ತಿ ಮೂಡುವುದು. ತಮ್ಮ ಆಸ್ತಿ, ಅಂತಸ್ತಿನ ಬಗ್ಗೆ  ಗರ್ವ ತೋರುವರು. ಸತ್ಯವಂತರೇ ಆಗಿದ್ದರೂ, ಪ್ರಾಸಂಗಿಕವಾಗಿ ಅವರಿಂದ  ಪ್ರಾಮಾಣಿಕತೆ ನಿರೀಕ್ಷಿಸುವುದು ಕಷ್ಟ. ಸಾಧು-ಸಂತರ ದರ್ಶನ ಮತ್ತು ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ. ಶಾಸ್ತ್ರಾಧ್ಯಯನ ಮಾಡುವವರಿಗೆ, ಮಠ ಮಾನ್ಯಗಳಿಂದ ಸನ್ಮಾನವಾಗಿ, ಸಾಮಾಜಿಕ ಪ್ರತಿಷ್ಠೆ ಹೆಚ್ಚುವುದು. ಗುಟ್ಟಾಗಿ ಆಸ್ತಿ ಮಾಡುವರು. ಅನೇಕ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿಯೇ ನಡೆಯಲಿದೆ. ಹೊಸಮನೆ ಕಟ್ಟುವ ವಿಚಾರವಿದ್ದಲ್ಲಿ ಬಂಧುಗಳಿಂದ ಆರ್ಥಿಕ ನೆರವು ದೊರೆಯಲಿದೆ. ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯಲಿದೆ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಸಿಂಹ ರಾಶಿ : ಈ ರಾಶಿಯವರಿಗೆ  ಗುರುವು ರಿಪು ಅಂದರೆ ಶತ್ರು ಸ್ಥಾನದಲ್ಲಿ ಗುರು ಗ್ರಹದ ಸಂಚಾರವಿರುವುದರಿಂದ, ಶತ್ರುಗಳ ಎಲ್ಲಾ ಮರ್ಮವನ್ನರಿತು, ಅವರ ತಂತ್ರಗಳು ಅವರಿಗೇ ತಿರುಗುವಂತೆ ಮಾಡುವಲ್ಲಿ ಯಶಸ್ವಿಯಾಗುವಿರಿ. ಆದಾಯದ ಮೂಲದಲ್ಲಿ ಎಷ್ಟೇ ಹೆಚ್ಚಳವಾದರೂ, ಆರ್ಥಿಕ ಸಮಸ್ಯೆ ತಪ್ಪಿದ್ದಲ್ಲ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗುವುದಲ್ಲದೆ, ವೈಯಕ್ತಿಕ ಆರೋಗ್ಯದಲ್ಲೂ ವ್ಯತ್ಯಾಸ ಕಂಡು ಬರಬಹುದು. ಆದರೆ, ಸಂಗೀತ ಕ್ಷೇತ್ರದಲ್ಲಿರುವವರು ವಿಶೇಷ ಸಾಧನೆ ಮಾಡಿ, ಕೀರ್ತಿವಂತರಾಗುವರು. ಯಾವುದೇ ಕೆಲಸದಲ್ಲಿ ಆರಂಭಿಕ ಆಲಸ್ಯ ತಪ್ಪಿದ್ದಲ್ಲ. ಸೋದರ ಮಾವನಿಂದಲೇ ಅಪಮಾನಕ್ಕೊಳಗಾಗಬಹುದು. ಸರ್ಕಾರಿ ನೌಕರರಿಗೆ ಯಾವುದೋ ಹಳೆಯ ಕೇಸೊಂದು ಮತ್ತೆ ವಿಚಾರಣೆಗೆ ಬಂದು, ದೂರದೂರಿಗೆ ವರ್ಗವಾಗಿ, ಕುಟುಂಬದಿಂದ ದೂರವಿರಬೇಕಾದ ಪ್ರಸಂಗ ಬರಬಹುದು. ವಿದ್ಯಾರ್ಥಿಗಳು,  ಅನೇಕ ಅವಕಾಶಗಳಿಂದ ವಂಚಿತರಾಗುವರು. ಬಂಧುಗಳ ಉಪಟಳ, ನಿಮ್ಮನ್ನು ಹೈರಾಣಾಗಿಸುವುದು. ಯೋಗಾಭ್ಯಾಸ, ಧ್ಯಾನಗಳನ್ನು ಮಾಡುವುದರ ಜೊತೆಗೆ, ವಿಷ್ಣು ಸಹಸ್ರನಾಮ ಪಠಣ ಮಾಡುವುದು ಲೇಸು.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಕನ್ಯಾ ರಾಶಿ: ಈ ರಾಶಿಯವರಿಗೆ ಪಂಚಮಭಾವದಲ್ಲಿ ಅಂದರೆ ಪುಣ್ಯ ಸ್ಥಾನದಲ್ಲಿ ಗುರು ಗ್ರಹ ಸಂಚಾರವಿರುವುದರಿಂದ ವಿದ್ಯಾರ್ಥಿಗಳಿಗೆ ವಿಶೇಷಾಧ್ಯಯನ ಮಾಡಲು ಉತ್ತಮ ಅವಕಾಶ ದೊರೆಯಲಿದೆ.ವಿದೇಶದಲ್ಲಿರುವ ಮಗನಿಂದ, ನಿರೀಕ್ಷಿತ ಶುಭ ಸಮಾಚಾರ ಕೇಳಿಬರಲಿದೆ. ಬಹಳ ಕಾಲದಿಂದ ಸಂತತಿ ಹೀನರಾದವರಿಗೆ, ಸಂತಾನ ಪ್ರಾಪ್ತಿಯ ಎಲ್ಲಾ ಲಕ್ಷಣಗಳು  ಕಂಡುಬರುತ್ತದೆ. ಹಿರಿಯರಿಂದ ಬರಬೇಕಾಗಿದ್ದ ಆಸ್ತಿಯು, ಅನಾಯಾಸವಾಗಿ ಕೈ ಸೇರಲಿದೆ. ಹಿಡಿದ ಯಾವುದೇ ಕೆಲಸಗಳು ಅನಾಯಾಸವಾಗಿ ನೆರವೇರಲಿವೆ. ಉತ್ತಮ ಆಚಾರ-ವಿಚಾರಗಳನ್ನು ರೂಢಿಸಿಕೊಳ್ಳುವರು. ದೊಡ್ಡ ದೊಡ್ಡ ನಗರಗಳಲ್ಲಿ ಮನೆ ಅಥವಾ ನಿವೇಶನ ಕೊಂಡುಕೊಳ್ಳುವ ಯೋಗವಿದೆ. ಆಲಂಕಾರಿಕ ವಸ್ತುಗಳ ಖರೀದಿ ಜೋರಾಗಿಯೇ ನಡೆಯಲಿದೆ. ಬೌದ್ಧಿಕ ಚುರುಕುತನದಿಂದ ಹಾಗೂ ಮಾತಿನ ಮೋಡಿಯಿಂದ ಎಲ್ಲರನ್ನೂ  ವಶಪಡಿಸಿಕೊಳ್ಳುವರು. ಮಕ್ಕಳಲ್ಲಿ ವಿಧೇಯತೆ ಮೂಡಿ, ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ನೆರವಾಗುವರು. ಬಹಳ ದಿನಗಳಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆ ಇಷ್ಟರಲ್ಲೇ ನಿವಾರಣೆಯಾಗಲಿದೆ. ಆದಾಯದ ಮೂಲದಲ್ಲಿ ತೀವ್ರ ಹೆಚ್ಚಳ ಕಂಡುಬಂದು, ಉಳಿತಾಯದ ಬಗ್ಗೆ ಚಿಂತಿಸುವಿರಿ, ಮನೆಯಲ್ಲಿ ಅನೇಕ ಮಂಗಳ ಕಾರ್ಯಗಳು ನಡೆಯಲಿವೆ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavani
ತುಲಾ ರಾಶಿ :
ಈ ರಾಶಿಯವರಿಗೆ ಚತುರ್ಥ ಸ್ಥಾನದಲ್ಲಿ ಅಂದರೆ, ಮಾತೃ ಸ್ಥಾನವನ್ನು ಪ್ರತಿನಿಧಿಸುತ್ತಿದ್ದು, ಕಳೆದು ಹೋಗಿದ್ದ ಹಿರಿಯರ ಪ್ರೀತಿ-ವಿಶ್ವಾಸ ಮರಳಿ ಪಡೆಯುವರು. ಹೊಸ ವಾಹನಗಳ ಖರೀದಿ ಯೋಗವಿದ್ದು, ಅದಕ್ಕೆ ಬೇಕಾದ ಆರ್ಥಿಕ ನೆರವು ದೊರೆಯಲಿದೆ. ಕುಲದೇವತಾನುಗ್ರಹ ಮತ್ತು ಆಶೀರ್ವಾದ ವಿಶೇಷವಾಗಿ ದೊರೆಯಲಿದೆ. ವೈರಿಗಳು ಇವರ ವಿರುದ್ಧ ಸೆಣೆಸದೆ, ಸ್ನೇಹ ಹಸ್ತಕ್ಕೆ, ತಾವಾಗಿಯೇ ಮುಂದೆ ಬರುವರು. ನಿರಂತರ ಮಾನ-ಸನ್ಮಾನಗಳು ನಡೆಯುತ್ತಲೇ ಇರುತ್ತವೆ. ಸಮಾಜದಲ್ಲಿ ಉನ್ನತ ವ್ಯಕ್ತಿಗಳೊಂದಿಗೆ ನಿರಂತರ ಒಡನಾಟವಿರುತ್ತದೆ. ಅನೇಕ ಸಾಕು ಪ್ರಾಣಿಗಳಿಗೆ ಆಶ್ರಯ ನೀಡುವರು. ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು, ರಾಜಕಾರಣಿಗಳು ತಾವೇ ಅತಿ ಮುತುವರ್ಜಿಯಿಂದ ಮಾಡಿಕೊಡುವರು. ಸೋದರನ ನೆರವು, ಸಕಾಲದಲ್ಲಿ ದೊರೆಯಲಿದೆ. ಕುಟುಂಬದಲ್ಲಿ ನೆಮ್ಮದಿ, ಸುಖ, ಶಾಂತಿ ನೆಲೆಸಲಿದೆ. ಇಷ್ಟೆಲ್ಲಾ
ಗುರುವಿನಾನುಗ್ರಹವಿದ್ದರೂ, ಮಾನಸಿಕ ಕೊರಗು ನಿಮ್ಮನ್ನು ಬಾಧಿಸದೇ ಇರದು. ಏನೋ ಅತೃಪ್ತಿ, ಅಸಮಾಧಾನ ಇದ್ದೇ ಇರುತ್ತದೆ. ಯೋಗ, ಧ್ಯಾನಗಳ ಮೊರೆ ಹೋಗುವುದು ಉತ್ತಮ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniವೃಶ್ಚಿಕ ರಾಶಿ : ಈ ರಾಶಿಯವರಿಗೆ ಗುರುವು ತೃತೀಯ ಸ್ಥಾನ ಅಂದರೆ, ವಾಕ್‌ ಸ್ಥಾನದಲ್ಲಿರುವುದರಿಂದ ಮತ್ತೊಬ್ಬರ ಬಗ್ಗೆ ಸದಾ ಕೆಟ್ಟಮಾತನ್ನೇ ಆಡುತ್ತಾ, ಪರಿಹಾಸ್ಯ ಮಾಡುವರು. ಆದರೆ ಆ ಮಾತುಗಳು ಅವರಿಗೇ ತಿರುಗುಬಾಣವಾಗಿ, ಅಪಮಾನದಿಂದ ತಲೆತಗ್ಗಿಸುವಂತೆ ಮಾಡಬಹುದು. ಇವರ ಜಿಪುಣತನದಿಂದಾಗಿ ಮಡದಿ, ಮಕ್ಕಳು ಕಷ್ಟಪಡುವರು. ನಿತ್ಯಾನುಷ್ಠಾನದಲ್ಲಿ ವಿಪರೀತ ಲೋಪವಾಗಲಿದೆ. ಬಂಧು ಜನರೊಂದಿಗೆ ದ್ವೇಷ, ನಿಷ್ಠೂರತೆ ಕಟ್ಟಿಕೊಳ್ಳುವರು. ಪರ ಸ್ತ್ರೀಯರೊಂದಿಗೆ ಗುಪ್ತ ವ್ಯವಹಾರ ಆರ್ಥಿಕ ನಷ್ಟವನ್ನುಂಟು ಮಾಡಲಿದೆ. ಅಗ್ನಿಮಾಂದ್ಯ ಸಮಸ್ಯೆಯಿಂದಾಗಿ, ಹಳೆಯ ರೋಗಗಳು ಮತ್ತೆ ಮರುಕಳಿಸ ಬಹುದು. ವಿನಾಕಾರಣ ಮಿತ್ರರೊಂದಿಗೆ ವಿರೋಧ ಕಟ್ಟಿ ಕೊಳ್ಳಬೇಕಾದೀತು. ಆರ್ಥಿಕ ಮೂಲದಲ್ಲಿ ಹೆಚ್ಚಳ ಕಂಡುಕೊಳ್ಳಲು, ಉತ್ತಮ ಅವಕಾಶ ಬಂದರೂ, ಮನೋಚಾಂಚಲ್ಯದಿಂದಾಗಿ ಕಳೆದುಕೊಳ್ಳ ಬಹುದು. ಇಷ್ಟೆಲ್ಲಾ ಇದ್ದರೂ, ಪೂರ್ವಪುಣ್ಯವೆಂಬಂತೆ ಸಾಮಾಜಿಕ ಗೌರವ ಹೆಚ್ಚಿ, ಸಂಘ ಸಂಸ್ಥೆಗಳಲ್ಲಿ ಉನ್ನತ ಪದವಿ ಗಳಿಸುವರು. ಹೋದಲ್ಲೆಲ್ಲಾ ರಾಜ ಮರ್ಯದೆ ಸಿಗುವುದು.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಧನು ರಾಶಿ : ಈ ರಾಶಿಯವರಿಗೆ ಗುರು ಗ್ರಹವು ದ್ವಿತೀಯ ಸ್ಥಾನದಲ್ಲಿದ್ದು, ಅಂದರೆ, ಧನ ಸ್ಥಾನದಲ್ಲಿದ್ದು, ಈ ರಾಶಿಯವರು, ಕಾವ್ಯ ಶಾಸ್ತ್ರ ರಚನೆಗಳಲ್ಲಿ ತೊಡಗಿಕೊಳ್ಳುವರು. ನ್ಯಾಯವಾದಿಗಳಿಗೆ ಕೋರ್ಟು-ಕಛೇರಿಗಳಲ್ಲಿ ಅವರ ವಾದಕ್ಕೆ ಮನ್ನಣೆ ಸಿಗಲಿದೆ, ಅತಿಯಾದ ಸುಖಭೋಗಗಳು ಆಕರ್ಷಿಸಲಿವೆ. ಅದರಿಂದಾಗಿ, ಅನೇಕ ಅನಾರೋಗ್ಯ ಸಮಸ್ಯೆಗಳು ಬಾಧಿಸಲಿವೆ. ಹಣ ಸಂಪಾದನೆಗೆ ಅತೀವ ತಿರುಗಾಟ ಅನಿವಾರ್ಯವಾಗಲಿದೆ. ಆದರೂ ಧನಾದಾಯ ಕಡಿಮೆ. ಸಕಾಲದಲ್ಲಿ ಸ್ನೇಹಿತರ ನೆರವು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದು. ಕೈಗಾರಿಕೋದ್ಯಮಿಗಳು ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದು ಲೇಸು. ಪರಸ್ತ್ರೀಯರ ವೈಯಕ್ತಿಕ ವಿಚಾರಗಳಲ್ಲಿ ಕುತೂಹಲ ತೋರದಿರುವುದು ಉತ್ತಮ. ಬಂಧು ದ್ವೇಷ ದೂರವಾಗಲಿದೆ. ಆಕಸ್ಮಿಕ ಧನಾಗಮ, ಕೆಲವು ಆರ್ಥಿಕ ಸಮಸ್ಯೆಗಳನ್ನು ಬಗೆ ಹರಿಸಲಿದೆ. ಗುರು-ಹಿರಿಯರ ಆಶೀರ್ವಾದ ಸದಾ ದೊರೆಯಲಿದೆ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಮಕರ ರಾಶಿ : ಈ ರಾಶಿಯವರಿಗೆ, ಗುರುಗ್ರಹವು ಜನ್ಮಸ್ಥ ಅಂದರೆ ತನುಭಾವದಲ್ಲಿದ್ದು, ಹಿರಿಯರ ಆಂತರ್ಯವನ್ನು ತಿಳಿದು ನಡೆಯುವರು. ಪರೋಪಕಾರವನ್ನು ಸಾಧ್ಯವಾದಷ್ಟು ಮಾಡಲು ಯತ್ನಿಸುವರು.ದ್ವೇಷಿಸುವವರನ್ನೂ ಕೂಡ ಪ್ರೀತಿಸುವ ಗುಣ ಇವರಲ್ಲಿ ಕಂಡು ಬರುವುದು. ಜನಪ್ರಿಯತೆ ಹೆಚ್ಚಲಿದ್ದು, ಮಾನ-ಸನ್ಮಾನಗಳು ನಡೆಯಲಿವೆ. ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುವ ಮನೋಭಾವ ಬೆಳೆಯುವುದು. ಧಾರ್ಮಿಕ ಕಾರ್ಯಗಳಿಗೆ ಮುಕ್ತ ಹಸ್ತದಿಂದ ದಾನಮಾಡುವರು. ಲೌಕಿಕ ವಿಷಯಗಳಲ್ಲಿ ಅನಾಸಕ್ತಿ ಮೂಡಲಿದೆ. ಅರ್ಧಕ್ಕೆ ನಿಂತಿದ್ದ ವಿದ್ಯಾಭ್ಯಾಸ ಮತ್ತೆ ಮುಂದುವರೆಯಲಿದೆ. ಆದಾಯದ ಮೂಲದಲ್ಲಿ ತುಸು ಕಡಿಮೆ ಎನಿಸಿದರೂ, ದೈನಂದಿನ ಜೀವನಕ್ಕೇನೂ ತೊಂದರೆಯಿಲ್ಲ. ತೀರ್ಥಯಾತ್ರೆ ಮಾಡುವ ಹಂಬಲ ಹೆಚ್ಚಲಿದೆ. ಜಪಾನುಷ್ಠಾನಗಳು ಸಿದ್ಧಿಸಲಿವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಸಂತುಷ್ಟರಾಗುವರು. ಒಟ್ಟಿನಲ್ಲಿ ಹೇಳಬೇಕೆಂದರೆ, ಇವರದು ನಿಶ್ಚಿಂತ ಜೀವನ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಕುಂಭ ರಾಶಿ : ವ್ಯಯ ಅಂದರೆ ಹನ್ನೆರಡನೇ ಸ್ಥಾನದಲ್ಲಿ, ಈ ರಾಶಿಯವರಿಗೆ ಗುರುಗ್ರಹದ ಸಂಚಾರವಿರುವುದರಿಂದ ಅನೇಕ ಬಾರಿ ಪ್ರಯಾಣ ಮಾಡಬೇಕಾಗಿ ಬಂದರೂ, ಹೋದ ಕೆಲಸವು ಪೂರ್ಣವಾಗದೆ ಮತ್ತೆ ಮತ್ತೆ ಹೋದಲ್ಲಿಗೇ ಹೋಗಬೇಕಾಗಬಹುದು. ಅನೇಕ ಕೆಟ್ಟ ಆಲೋಚನೆಗಳು ಮನದಲ್ಲಿ ಸುಳಿದಾಡಬಹುದು. ವಿವೇಚನೆ ಇಲ್ಲದೆ ಮತ್ತೊಬ್ಬರೊಂದಿಗೆ ವ್ಯವಹರಿಸುವರು. ನಿರ್ಲಜ್ಜೆಯಿಂದ ತಮ್ಮ ಬೇಕು, ಬೇಡಗಳನ್ನು ಮತ್ತೊಬ್ಬರಿಗೆ ಹೇಳುವರು.ಇವರ ಅವಿವೇಕತನದಿಂದ, ಮನೆ, ಮಠ ಕಳೆದುಕೊಂಡರೂ ಆಶ್ಚರ್ಯವಿಲ್ಲ. ಸಂಪಾದನೆ ಎಲ್ಲವೂ ದುರ್ವ್ಯಸನಗಳಿಗೇ  ಮೀಸಲು.  ನೀಚಜನರ ಸಹವಾಸ ಸಾಂಸಾರಿಕ ನೆಮ್ಮದಿಯನ್ನು ಹಾಳು ಮಾಡುವುದು. ಕೃತಜ್ಞತೆ ಇವರ ಮೂಲಮಂತ್ರವಾಗಲಿದೆ. ಆದಾಯದಲ್ಲಿ ಏನೇ ಏರುಪೇರಾದರೂ ಇವರು ನಿಶ್ಚಿಂತರು. ಶನಿ ಮತ್ತು ಗುರುಗ್ರಹಗಳ ವಿಶೇಷ ಜಪಾನುಷ್ಠಾನ ಮಾಡದೇ ವಿಧಿಯಿಲ್ಲ. ಗುರು ಚರಿತ್ರೆ ಹೆಚ್ಚು ಪಾರಾಯಣ ಮಾಡಿ.

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ' - Janathavaniಮೀನ ರಾಶಿ : ಈ ರಾಶಿಯವರಿಗೆ, ಗುರುಗ್ರಹವು ಲಾಭ ಸ್ಥಾನದಲ್ಲಿ ಅಂದರೆ, ಹನ್ನೊಂದನೇ ಮನೆಗೆ ಬರುವವನಿದ್ದು, ರಾಶಿಯವರು, ಸ್ವಸಾಮರ್ಥ್ಯದಿಂದಲೇ, ಹಿಡಿದ ಕೆಲಸ ಸಾಧಿಸುವರು. ಕುಟುಂಬದಲ್ಲಿ ಇವರ ಮಾತಿಗೆ ವಿಶೇಷ ಮಾನ್ಯತೆ ದೊರೆಯುವುದು. ಭೂ, ವಾಹನಾದಿಗಳನ್ನು  ಇಚ್ಛಾ ಮಾತ್ರದಿಂದಲೇ ಪಡೆಯುವರು. ಚಾಟಿ ಇಲ್ಲದೆ ಬುಗುರಿಯಾಡಿಸುವ ಕಲೆ ಇವರಿಗೆ ಕರಗತವಾಗಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಮನೆಯಲ್ಲಿ ಹಿರಿಯರ ಬಗ್ಗೆ ವಿಶೇಷ ಕಾಳಜಿ ವಹಿಸುವರು. ಖಾಸಗಿ ಕಂಪನಿ ನೌಕರರಿಗೆ, ಮೇಲಾಧಿಕಾರಿಗಳಿಂದ ಮಾನ್ಯತೆ ಸಿಗಲಿದೆ. ಬ್ಯಾಂಕ್‌ ನೌಕರರಿಗೆ ಅವರುhttp://www.janathavani.com/wp-admin/post.php?post=34731&action=edit# ಇಷ್ಟಪಟ್ಟ ಸ್ಥಳಗಳಿಗೆ ವರ್ಗಾವಣೆಯಾಗಲಿದೆ. ನವವಿವಾಹಿತ ದಂಪತಿಗಳಿಗೆ ಸಂತಾನ ಭಾಗ್ಯ ಒದಗಿಬರಲಿದೆ. ಆದಾಯದಲ್ಲಿ  ಹೆಚ್ಚಳವಾಗಲಿದ್ದು, ಸಾಕಷ್ಟು ಉಳಿತಾಯವೂ ಆಗಲಿದೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ, ವ್ಯವಹಾರದಲ್ಲಿ ನೈಪುಣ್ಯ ಸಾಧಿಸುವಿರಿ. ಮನೆಯಲ್ಲಿ ಮಂಗಳಕಾರ್ಯಗಳು ನಿಮ್ಮ ನೇತೃತ್ವದಲ್ಲಿ ನಡೆಯುವವು. ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ನೆರವಾಗಿ.


 (ವಿಶೇಷ ಸೂಚನೆ : ಮೇಲ್ಕಂಡ ವಿಚಾರ-ವಿಮರ್ಶೆಗಳು ಸರ್ವೇಸಾಮಾನ್ಯವಾಗಿದ್ದು, ಅವರವರ ಜಾತಕ ಕುಂಡಲಿ ಹಾಗೂ ದಶಾ-ಭುಕ್ತಿ, ಅಂತರಾಂತರ ಭುಕ್ತಿಗಳಿಗನುಸಾರವಾಗಿ ವ್ಯತ್ಯಾಸವಾಗುವ ಸಂಭವವಿದೆ. ಆದ್ದರಿಂದ, ಹೆಚ್ಚಿನ ವಿವರಗಳಿಗೆ, ನಿಮ್ಮ ವಿಶ್ವಸನೀಯ ಜ್ಯೋತಿಷ್ಯರಲ್ಲಿ ಫಲಭಾಗಗಳನ್ನು ತಿಳಿಯಬಹುದು.)


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]

 

error: Content is protected !!