ಜಗಳೂರು, ನ.28- ಮಕ್ಕಳಲ್ಲಿರುವ ಸೃಜನಶೀಲ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕೆಂದು ರಾಜ್ಯ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಿನ್ನೋಬನಹಳ್ಳಿ ಮೊರಾರ್ಜಿ ತಿಳಿಸಿದರು.
ತಾಲ್ಲೂಕಿನ ಬಂಗಾರಕ್ಕನಗುಡ್ಡ ಗ್ರಾಮದಲ್ಲಿ ಮುರಾರ್ಜಿ ಕಲಾ ಬಳಗ ಹಾಗೂ ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಯಂತ್ರಗಳು ಎಂಬ ಭಾವನೆ ನಮ್ಮ ಪೋಷಕರಲ್ಲಿದೆ. ಮಕ್ಕಳಿಗೆ ಬಯಕೆಗಳಿವೆ, ಅವರದೇ ಆದ ಕನಸುಗಳಿವೆ ಎಂಬುದನ್ನು ತಿಳಿಯದೆ ಚೆನ್ನಾಗಿ ಓದಿ ಹೆಚ್ಚು ಅಂಕ ಗಳಿಸುವಂತೆ ಒತ್ತಡ ಹಾಕಿ ಅವರ ಬಯಕೆಗಳನ್ನು ಹಾಗೂ ಮಕ್ಕಳೊಂದಿಗೆ ಬೆರೆಯುವ ಅಮೂಲ್ಯವಾದ ಕ್ಷಣಗಳನ್ನು ಅನುಭವಿಸಲು ಬಿಡದೆ ಕಡಿವಾಣ ಹಾಕುತ್ತಾ ಮಕ್ಕಳ ಬಾಲ್ಯದ ಹಕ್ಕನ್ನು ಉಲ್ಲಂಘನೆ ಮಾಡುತ್ತಿದ್ದೇವೆ
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಗೀತ, ನೃತ್ಯ, ಚಿತ್ರಕಲೆ ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಭಾಗ ವಹಿಸಲು ಪ್ರೋತ್ಸಾಹಿಸಿದರೆ ಮಕ್ಕಳಲ್ಲಿನ ಒತ್ತಡ ಖಿನ್ನತೆ ದೂರವಾಗಿ ಮಾನಸಿಕ ಹಾಗೂ ದೈಹಿಕ ಸದೃಢತೆ ಬೆಳೆಯಲು ಸಹಕಾರಿಯಾಗುತ್ತದೆ.
ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕ ಮೇಲುಗಿರಿ ರೆಡ್ಡಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿ ಪ್ರೋತ್ಸಾ ಹಿಸುವ ಕಾರ್ಯವನ್ನು ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ ಹಾಗೂ ಮೊರಾರ್ಜಿ ಕಲಾ ಬಳಗ ಮಾಡು ತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಗುರುಮೂರ್ತಿ, ಗ್ರಾಮದ ಮುಖಂಡರಾದ ತಿಪ್ಪೇಸ್ವಾಮಿ, ನಿಂಗಪ್ಪ, ರಂಗನಾಥ್, ಬಸವರಾಜ್, ಅಂಜಿನಪ್ಪ, ಮಾರಣ್ಣ ಗಾಯಕ ಡಿ.ಬಿ.ನಿಂಗರಾಜ್ ಉಪಸ್ಥಿತರಿದ್ದರು.
ಭುವನೇಶ್ವರಿ ಪ್ರಾರ್ಥಿಸಿ, ಲತಾ ಸ್ವಾಗತಿಸಿ, ಗಾಯಕ ರುದ್ರೇಶ್ ವಂದಿಸಿ, ಶಿಕ್ಷಕ ತಿಪ್ಪೇಸ್ವಾಮಿ ನಿರೂಪಿಸಿದರು.