ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ದಿನೋತ್ಸವದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ದಾವಣಗೆರೆ, ನ. 28- ಇಂದು ನಾವೇನಾಗಿದ್ದೇವೆಯೋ ಅದಕ್ಕೆ ಸಮಾಜವೇ ಕಾರಣ. ಹಾಗಾಗಿ ಯಾವುದಾದರೂ ರೀತಿಯಲ್ಲಿ ಸಮಾಜದ ಋಣ ತೀರಿಸುವ ಕೆಲಸ ಮಾಡ ಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯಿಂದ ಶ್ರೀ ಸತ್ಯಸಾಯಿ ಬಾಬಾರವರ 95ನೇ ಜನ್ಮ ದಿನೋತ್ಸವದ ಅಂಗವಾಗಿ ಮೊನ್ನೆ ಹಮ್ಮಿಕೊಂಡಿದ್ದ ಅಮೃತಕಲಶ ಎಂಬ ಹೆಸರಿನಲ್ಲಿ ಆಹಾರ ಸಾಮಗ್ರಿಗಳ ಕಿಟ್ಗಳನ್ನು ಮತ್ತು ಚಳಿಗಾಲದಲ್ಲಿ ರಕ್ಷಣೆಗಾಗಿ ಬ್ಲಾಂಕೆಟ್ಗಳನ್ನು ವಿತರಿಸುವ ‘ಸೇವಾ ಪುಷ್ಪಾಂಜಲಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಸಮಾಜಕ್ಕೆ ಭಾರವಾಗಬಾರದು. ನಮ್ಮಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ ಎಂದರೆ, ನಮ್ಮ ಬದುಕಿಗೆ ಅರ್ಥ ಇರುವುದಿಲ್ಲ. ಸೇವೆಯಲ್ಲಿಯೇ ನಿಜವಾದ ಅಧ್ಯಾತ್ಮವಿದೆ. ಇಂ ತಹ ಸೇವಾ ಕಾರ್ಯಗಳಿಂದ ಬದುಕಿಗೆ ಅರ್ಥ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೊರೊನಾದ ಕರಾಳ ಛಾಯೆ ಅನೇಕರ ಬದುಕನ್ನು ಅಲ್ಲಾಡಿಸಿದೆ. ಈ ಸಂದರ್ಭದಲ್ಲಿ ಅಂತಹವರಿಗೆ ಅವಶ್ಯಕ ಪದಾರ್ಥಗಳನ್ನು ಪೂರೈಸುತ್ತಿರುವುದು ಉತ್ತಮ ಸೇವಾ ಕಾರ್ಯ. ನಿಜವಾದ ಬಡವರು, ಶ್ರಮಿಕರು ಸ್ವಾಭಿಮಾನಿ ಗಳಾಗಿರುತ್ತಾರೆ. ಅಂತಹವರನ್ನು ಗುರುತಿಸಿ ‘ಅಮೃತಕಲಶ’ ಎಂಬ ಹೆಸರಿನಲ್ಲಿ ಆಹಾರ ಸಾಮಗ್ರಿಗಳನ್ನು ನೀಡುತ್ತಿರುವ ಈ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಪಾಲಿಕೆ ಮಹಾಪೌರ ಬಿ.ಜಿ.ಅಜಯ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಸೇವಾ ವಿಭಾಗದ ರಾಜ್ಯ ಸಂಯೋಜಕ ಎಂ. ರಾಜಶೇಖರ ರೆಡ್ಡಿ ಮಾತನಾಡಿ, ಸೇವೆ ಹಾಗೂ ಅಧ್ಯಾತ್ಮ ಪಕ್ಷಿಯ ಎರಡು ರೆಕ್ಕೆಗಳಂತೆ. ಇವುಗಳನ್ನು ಸರಿಯಾಗಿ ಬಳಸುವುದೇ ಸಾಧನೆ. ಕೊಡುತ್ತಿರುವವರಿಗಿಂತ ಫಲಾನುಭವಿಗಳೇ ಮುಖ್ಯ. ಅವರ ಸಹಕಾರವಿ ಲ್ಲದಿದ್ದರೆ, ಇದು ಸಾಧ್ಯವಾಗುವುದಿಲ್ಲ. ನಿಜವಾಗಿ ಅವರು ಅಭಿನಂದನೀಯರು ಎಂದು ತಿಳಿಸಿದರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ಎಸ್. ಪ್ರಶಾಂತ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಯೋಜಕ ಜಗನ್ನಾಥ ನಾಡಿಗೇರ್, ಸಮಿತಿಯ ಸಂಚಾಲಕ ಭೋಜರಾಜ್ ಎಲ್. ದೈವಜ್ಞ, ಜಿಲ್ಲಾ ಸಂಯೋಜಕರಾದ ಬಿ.ಎನ್. ಸಾಯಿಪ್ರಸಾದ್, ಶ್ರೀಮತಿ ಆರ್. ವಿಶಾಲಾಕ್ಷಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಐ.ಟಿ ವಿಭಾಗದ ಸಂಯೋಜಕ ಕಾಸಲ್ ಅರುಣ್ಕುಮಾರ್ ಸ್ವಾಗತಿಸಿದರು. ವಿದ್ಯಾ ವಿಭಾಗದ ಸಂಯೋಜಕರಾದ ಶ್ರೀಮತಿ ಸಾಯಿನಿ ರಾಹುಲ್ ಖರೆ ಮತ್ತು ಅನಿಲ್ಕುಮಾರ್ ವಿತರಣಾ ಕಾರ್ಯವನ್ನು ನಿರ್ವಹಿಸಿದರು. ವಿದ್ಯಾ ವಿಭಾಗದ ಜಿಲ್ಲಾ ಸಂಯೋಜಕಿ ಶ್ರೀಮತಿ ಶುಭಾಷಿನಿ ನಾಗರಾಜ್ ವಂದಿಸಿದರು. ಕುಮಾರಿ ಸಿಂಚನಾ ಜಿ.ರಾವ್ ಕಾರ್ಯಕ್ರಮ ನಿರೂಪಿಸಿದರು.