ಕಾನೂನು ಸೇವಾ ಪ್ರಾಧಿಕಾರದ ಸಂವಿಧಾನ ದಿನಾಚರಣೆಯಲ್ಲಿ ನ್ಯಾಯಾಧೀಶರಾದ ಸಾಬಪ್ಪ ಅಭಿಮತ
ದಾವಣಗೆರೆ, ನ.28- ನಾವು ನಮ್ಮ ಸಂವಿಧಾನವನ್ನು ಸರಿಯಾಗಿ ಓದಿ, ಅರ್ಥಮಾಡಿಕೊಂಡು ಅದನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಸಾಬಪ್ಪ ತಿಳಿಸಿದರು.
ನಗರದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಕೀರ್ಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮೊನ್ನೆ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಭಾರತ ಒಂದು ಸ್ವತಂತ್ರವಾದ ಸಾರ್ವಭೌಮ ರಾಷ್ಟ್ರ. ಅದೊಂದು ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ. ನಮ್ಮ ಸಂವಿಧಾನವನ್ನು ಹಲವು ಮೂಲ ತತ್ವಗಳ ಅಡಿಪಾಯದ ಮೇಲೆ ರೂಪಿಸಲಾಗಿದೆ. ಈ ಮೂಲ ತತ್ವಗಳನ್ನು ಬದಲಿಸುವುದಾಗಲೀ, ತಿದ್ದುಪಡಿ ಮಾಡಲು ಆಗದು. ಸಂವಿಧಾನದ ಆಶಯದಂತೆ ಭಾರತ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಕೊಡಿಸುವುದು ನಮ್ಮ ಗುರಿಯಾಗಬೇಕೆಂದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರೂ, ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್ಕುಮಾರ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟ ಒಂದು ದೀರ್ಘಕಾಲದ ಮತ್ತು ಶತಮಾನ ಕ್ಕಿಂತಲೂ ಹೆಚ್ಚು ಕಾಲಾವಧಿಯ ಹೋರಾಟ. ಅದು ಕೇವಲ ಒಂದು ಸಮಸ್ಯೆಗಾಗಿ ನಡೆದ ಹೋರಾಟವಲ್ಲ. ನಮಗೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತದಲ್ಲಿ ಸುಮಾರು 600 ಅರಸೊತ್ತಿಗೆಗಳು ಇದ್ದವು. ಅವುಗಳ ನ್ನೆಲ್ಲಾ ರದ್ದುಗೊಳಿಸಿ ಇಡೀ ದೇಶವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ರಾಜಕೀಯ ಆಡಳಿತಕ್ಕೆ ಒಳಪಡಿಸುವಲ್ಲಿ ನಮ್ಮ ಸಂವಿಧಾನವು ಯಶಸ್ವಿಯಾಗಿದೆ. ಸಂವಿಧಾನ ಎಷ್ಟೇ ಉತ್ತಮವಾಗಿರಲಿ. ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೆಟ್ಟದಾಗಿ ಬಿಡುವುದು ಖಂಡಿತ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ನಾವು ಎಚ್ಚರದಿಂದ ನೆನಪಿನಲ್ಲಿ ಇಟ್ಟುಕೊಳ್ಳಬೇಕೆಂದು ಹೇಳಿದರು.
ಹಿರಿಯ ವಕೀಲ ಅನೀಷ್ಪಾಷಾ ಮಾತನಾಡಿ, ಸ್ವಾತಂತ್ರ್ಯ ಎಂಬ ಪದ ಕೇವಲ ಘೋಷಣೆಯಾಗಿ ಉಳಿಯದೇ ವಾಸ್ತವಿಕ ಅರ್ಥ ಪಡೆದುಕೊಳ್ಳುವುದು ಮುಖ್ಯವಾಗಿದೆ. ನಮ್ಮ ಸಂವಿಧಾನ ಪ್ರಸ್ತಾವನೆಯಲ್ಲಿ ಸಾಮಾಜಿಕ ನ್ಯಾಯ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹಿಂದುಳಿದವರು, ಶೋಷಣೆಗೆ ಒಳಪಟ್ಟವರನ್ನು ಮೇಲಕ್ಕೆತ್ತಲು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದರ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಬೇಕೆಂದರು.
ವಕೀಲ ಆಂಜನೇಯ ಮಾತನಾಡಿದರು.