ಸೌಲಭ್ಯಗಳು ಸಿಗದೇ ವಂಚಿತರಾಗಿದ್ದ ಅನೇಕರಿಗೆ ಪೌತಿ ಖಾತೆ ಆಂದೋಲನ

ದಾವಣಗೆರೆ,ನ.29- ಕುಟುಂಬದ ಯಜಮಾನ ತೀರಿಹೋದ ನಂತರ ಮನೆಯ ವಾರುಸದಾರರಿಗೆ ಎಷ್ಟೋ ವರ್ಷಗಳ ಕಾಲ ಖಾತೆ ಬದಲಾವಣೆ ಯಾಗದೇ ಅನೇಕ ರೈತರಿಗೆ ಬೆಳೆ ವಿಮೆ, ಸಾಲ ಇತರೆ ಸರ್ಕಾರದ ಸೌಲಭ್ಯಗಳು ದೊರಕುತ್ತಿರಲಿಲ್ಲ. ಇದನ್ನು ಅರಿತ ಸರ್ಕಾರ ಇದೀಗ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸಿ, ಪೋತಿ ಖಾತೆ ಆಂದೋಲನದ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊ ಟ್ಟಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯ ದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಹೊನ್ನಾಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ತಹಶೀಲ್ದಾರ್ ಕಚೇರಿಯಿಂದ ಆಯೋಜಿಸಲಾಗಿದ್ದ ಪೌತಿ ಖಾತೆ ಆಂದೋಲನ ಹಾಗೂ ವಿವಿಧ ಸೌಲಭ್ಯಗಳ ಆದೇಶ ಪ್ರತಿಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊನ್ನಾಳಿ ತಾಲ್ಲೂಕಿನಲ್ಲಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ 76 ಕೋಟಿ ರೂ. ಮಂಜೂರಾಗಿದೆ. ಧೂಳು ಮುಕ್ತ ನಗರಕ್ಕಾಗಿ ಉತ್ತಮ ರಸ್ತೆ, ಚರಂಡಿ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಹಿಂದೆ ಯಾವಾಗಲೋ ಮನೆ ಯಜಮಾನ ತೀರಿಕೊಂಡು ಮನೆಯ ಸದಸ್ಯರಿಗೆ ನಿಯಮಾನುಸಾರ ಖಾತೆ ಬದಲಾವಣೆಯಾಗದೇ ಅನುಭವಿಸುತ್ತಿದ್ದ ನಷ್ಟಗಳು ಮತ್ತು ಸೌಲಭ್ಯಗಳು ಸಿಗದೇ ವಂಚಿತರಾಗಿದ್ದ ಅನೇಕರಿಗೆ ಪೌತಿ ಖಾತೆ ಆಂದೋಲನದಿಂದ ನಮ್ಮ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಅತ್ಯಂತ ಕಡಿಮೆ ಅವಧಿಯಲ್ಲಿ ಪೌತಿ ಖಾತೆ ಆಂದೋಲನ ಮತ್ತು ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು, ಜನರ ಮನೆ ಬಾಗಿಲಿಗೇ ಸರ್ಕಾರಿ ಸೌಲಭ್ಯ ಒದಗಿಸುವ ಸದುದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಮಧ್ಯವರ್ತಿಗಳ ಹಾವಳಿ ನಿಲ್ಲಬೇಕು, ಕಾನೂನಿನ ಅರಿವಿನ ಕೊರತೆ, ಅನುಕೂಲ ಇಲ್ಲದವರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಆಂದೋಲನ ಏರ್ಪಡಿಸಿದ್ದು, ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಜನಪ್ರತಿನಿಧಿಗಳೂ ಸಹ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುವಂತಹ ಪೂರಕ ವಾತಾವರಣ ನಿರ್ಮಿಸಿದ್ದಾರೆ ಎಂದರು.

ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ಪೋತಿ ಖಾತೆ ಬದಲಾವಣೆಯಲ್ಲಿ ಆಗುತ್ತಿದ್ದ ವಿಳಂಬ ಮತ್ತು ಗೊಂದಲಗಳನ್ನು ನಿವಾರಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಪೋತಿ ಖಾತೆ ಆಂದೋಲನಕ್ಕೆ ಆದೇಶಿಸಿದ್ದು, ಕೆಲವು ನಿಯಮಗಳನ್ನು ಸರಳಗೊಳಿಸಿ ಖಾತೆ ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನರು ಇದರ ಸದುಪಯೋಗ ಪಡೆಯಬೇಕೆಂದು ವಿವರಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕೆ.ವಿ.ಶ್ರೀಧರ್ ಮಾತನಾಡಿದರು. ಹೊನ್ನಾಳಿ ತಹಶೀಲ್ದಾರ್ ತುಷಾರ್‌ ಬಿ.ಹೊಸೂರ ಸ್ವಾಗತಿಸಿದರು. ಉಪ ತಹಶೀಲ್ದಾರ್ ಪರಮೇಶ್ ವಂದಿಸಿದರು.

ಜಿ.ಪಂ.ಸದಸ್ಯ ವೀರಶೇಖರಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಚಂದ್ರಮ್ಮ ಹಾಲೇಶಪ್ಪ, ಉಪಾಧ್ಯಕ್ಷ ರಂಗನಾಥ್, ಅಧಿಕಾರಿಗಳು ಹಾಗೂ ಫಲಾನುಭವಿಗಳು ಇದ್ದರು.

error: Content is protected !!