‘ಯಂತ್ರಶ್ರೀ’ ಯೋಜನೆಯಡಿ 10 ಸಾವಿರ ಎಕರೆಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ಅಭಿಯಾನಕ್ಕೆ ಚಾಲನೆ
ದಾವಣಗೆರೆ, ನ. 29- ಯಂತ್ರೋಪಕರಣದ ಬಳಕೆ ಯಿಂದ ಮಾತ್ರ ರೈತರ ಆದಾಯ ಹೆಚ್ಚಳ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಿಇಒ ಡಾ.ಎಲ್.ಹೆಚ್. ಮಂಜುನಾಥ ಹೇಳಿದರು.
ತಾಲ್ಲೂಕಿನ ದ್ಯಾಮೇನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ `ಯಂತ್ರಶ್ರೀ’ ಯೋಜನೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಜಿಲ್ಲಾ ವ್ಯಾಪ್ತಿಯ 10 ಸಾವಿರ ಎಕರೆಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿ ದೊಡ್ಡ ರೈತರಿಗಿಂತ ಸಣ್ಣ ಮತ್ತು ಅತಿ ಸಣ್ಣ ರೈತರು ಆದಾಯವಿಲ್ಲದೆ ಹೆಚ್ಚಿನ ಸಮಸ್ಯೆ ಅನುಭವಿಸುವಂತಾಯಿತು. ಅವರಿಗೆ ಆದಾಯಕ್ಕಿಂತ ಖರ್ಚೇ ಹೆಚ್ಚು. ಇದನ್ನು ಮನಗೊಂಡ ಸರ್ಕಾರ ಎರಡನೇ ಹಸಿರು ಕ್ರಾಂತಿ ಬಗ್ಗೆ ಚಿಂತಿಸುತ್ತಿದೆ. ಆದರೆ ರೈತರ ಆದಾಯ ದ್ವಿಗುಣವಾಗಬೇಕಾದರೆ ಯಂತ್ರೋಪಕರಣಗಳ ಬಳಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಕೃಷಿಗೆ ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ, ನೀರು ಬಳಕೆ, ಕೃಷಿ ಯೋಜನೆ ಬಗ್ಗೆ ಸಮರ್ಪಕ ಮಾಹಿತಿ, ಆಧುನಿಕ ಯಂತ್ರಗಳ ಬಳಕೆಯ ಅರಿವಿದ್ದರೆ ರೈತರು ಲಾಭದಾಯಕ ಕೃಷಿ ಮಾಡಿಕೊಂಡು ಜೀವನ ಹಸನು ಮಾಡಿಕೊಳ್ಳಬಹುದು ಎನ್ನುವುದನ್ನು ಮನಗಂಡೇ ಧರ್ಮಸ್ಥಳ ಸಂಸ್ಥೆ ಯಂತ್ರಶ್ರೀ ಯೋಜನೆಗೆ ಮಹತ್ವ ನೀಡಿದೆ ಎಂದರು.
ಹಿಂದಿನ ಸರ್ಕಾರ ರೈತ ಯಂತ್ರೋಪಕರಣ ಬಾಡಿಗೆ ನೀಡುವ ಯೋಜನೆ ಜಾರಿಗೆ ತಂದಿತ್ತು. ಇದಕ್ಕೆ ನಮ್ಮ ಸಂಸ್ಥೆ ಕ್ಕೆ ಜೋಡಿಸಿ 164 ಹೋಬಳಿಯಲ್ಲಿ ಕೇಂದ್ರ ತೆರೆಯಿತು. ಸರ್ಕಾರ 100 ಕೋಟಿ, ಧರ್ಮಸ್ಥಳ ಸಂಸ್ಥೆ 60 ಕೋಟಿ ಬಂಡವಾಳ ಹೂಡಿತು. ನಂತರ ಆರು ವರ್ಷಗಳಲ್ಲಿ ಎಷ್ಟೆ ನಷ್ಟವಾದರೂ ಸಂಸ್ಥೆ ಮತ್ತೆ 40 ಕೋಟಿ ಅನುದಾನ ಹಾಕಿ ರೈತರ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಶೈಲಜಾ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ತಾ.ಪಂ. ಸದಸ್ಯ ಹೆಚ್.ಎಂ. ಮರುಳಸಿದ್ದಪ್ಪ, ಪ್ರಗತಿಪರ ರೈತ ಚೇತನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ, ಯೋಜನಾಧಿಕಾರಿ ಪದ್ಮಯ್ಯ ಹಾಗೂ ಇತರರು ಉಪಸ್ಥಿತರಿದ್ದರು.