ಹರಪನಹಳ್ಳಿ, ನ.29- ಅಕ್ರಮವಾಗಿ ಪಡಿತರ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಪಟ್ಟಣದ ಪೊಲೀಸರು ಜಫ್ತು ಮಾಡಿ ಪಡಿತರದೊಂದಿಗೆ ಲಾರಿ ಚಾಲಕ ಮತ್ತು ಕ್ಲೀನರ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಾಹಿತಿಯೊಂದನ್ನು ಆಧರಿಸಿ, ಸ್ಥಳೀಯ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪ್ರಕಾಶ್ ಅವರು ತಮ್ಮ ಸಿಬ್ಬಂದಿ ಜೊತೆ ಇಲ್ಲಿಯ ಹೊಸಪೇಟೆ ರಸ್ತೆಯ ಪೂರ್ವಾಚಾರಿ ಬಡಾವಣೆ ಬಳಿ ತೆರಳಿ ಕಾದು ಲಾರಿಯನ್ನು ತಡೆದಿದ್ದಾರೆ.
ಬಾಗಳಿ ಗ್ರಾಮ ಲೆಕ್ಕಾಧಿಕಾರಿ ನನ್ನೇಸಾಬ್, ಗ್ರಾಮ ಸಹಾಯಕ ಮಹೇಂದ್ರ, ಆಹಾರ ನಿರೀಕ್ಷಕರಾದ ಟಿ.ಕೆ.ಎಂ. ಕೊಟ್ರಮ್ಮ ಅವರೊಂದಿಗೆ ಲಾರಿಯನ್ನು ತಪಾಸಣೆ ಮಾಡಿದಾಗ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಮತ್ತು ಸರ್ಕಾರದ ಇತರೆ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅಕ್ಕಿ ಎಂದು ತಿಳಿದು ಬಂದಿದೆ.
34,365 ಕಿಲೋ ಅಕ್ಕಿ ಇದ್ದು, 3,43,650 ರೂ. ಮೌಲ್ಯದ್ದಾಗಿದ್ದು, ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕ ಗಾಳೆಮ್ಮನ ಗುಡಿ ಗ್ರಾಮದ ಆರ್. ಮೂರ್ತಿ ಹಾಗೂ ಕ್ಲೀನರ್ ಮುರಾಪುರದ ಹನುಮಂತ ಇಬ್ಬರನ್ನೂ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿ ಕೂಲಹಳ್ಳಿ ಕೊಟ್ರೇಶ್ ಮತ್ತು ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.