ಹಳ್ಳಿಯ ಸೊಗಡಿನ ವ್ಯಕ್ತಿ ಎಸ್.ಎ. ರವೀಂದ್ರನಾಥ್ – ಜಿ.ಎಂ.ಸಿದ್ದೇಶ್ವರ
ದಾವಣಗೆರೆ, ನ.27- ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಎಸ್.ಎ. ರವೀಂದ್ರನಾಥ್ ಅಮೃತ ಮಹೋತ್ಸವ ಮಕ್ಕಳ ಕ್ರೀಡಾಂಗಣದ ಉದ್ಘಾಟನೆ ಹಾಗೂ ಎಸ್.ಎ. ರವೀಂದ್ರನಾಥ್ ಅವರ ಅಮೃತ ಮಹೋತ್ಸವದ ಅಭಿನಂದನಾ ಸಮಾರಂಭವು ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ಧೇಶ್ವರ ಅವರು, ರವೀಂದ್ರ ನಾಥ್ ರಾಜಕೀಯವಾಗಿ ಅಧಿಕಾರದ ಉತ್ತುಂಗಕ್ಕೆ ಏರಿದ್ದರೂ ಸಹ ಜನರೊಂದಿಗೆ ಎಷ್ಟು ನಿಕಟವಾಗಿ ಸಂಬಂಧವನ್ನು ಹೊಂದಿದ್ದರು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯರಾಗಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ, 5 ಬಾರಿ ಶಾಸಕರಾಗಿ,
7 ವರ್ಷ ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ, ಸಹ ಇಂದಿಗೂ ಎಸ್.ಎ. ರವೀಂದ್ರನಾಥ್ ಅವರು ತಮ್ಮ ಗ್ರಾಮೀಣ ಸೊಗಡಿನ ವ್ಯಕ್ತಿತ್ವವನ್ನು ಬಿಟ್ಟಿಲ್ಲ ಎಂದು ಹೇಳಿದರು.
ಕ್ರೀಡಾಂಗಣದ ಆವರಣದಲ್ಲಿ ನಿರ್ಮಿಸ ಲಾಗಿರುವ ಧ್ಯಾನಸ್ಥ ಶಿವನ ಪುತ್ಥಳಿಯನ್ನು ಉದ್ಘಾ ಟಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಸಹಕಾರ್ಯವಾಹಕ ಪಟ್ಟಾಭಿರಾಮ್ ಅವರು, ಒಂದು ಪ್ರದೇಶದ ಬದುಕು ಸುಸಂಸ್ಕೃತ ಎನ್ನಿಸಿಕೊಳ್ಳಬೇಕಾದರೆ ಅಲ್ಲಿನ ಪ್ರಜ್ಞಾವಂತ ಪ್ರಜೆಗಳು ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಒಳಿತಿಗಾಗಿ ದುಡಿಯಬೇಕಾಗುತ್ತದೆ ಎಂದರು.
ರಾಜಕೀಯ ಕ್ಷೇತ್ರವಿರಲಿ, ಸಮಾಜಸೇವಾ ಕ್ಷೇತ್ರವಿರಲಿ, ಶಿಕ್ಷಣ ಕ್ಷೇತ್ರವಿರಲಿ ಪ್ರತಿಯೊ ಬ್ಬರೂ ತಮ್ಮ ಸೇವೆಯನ್ನು ಸಮಾಜಕ್ಕಾಗಿ ಅರ್ಪಿಸಬೇಕಾ ಗುತ್ತದೆ. ದೀರ್ಘಕಾಲ ನೆನಪಲ್ಲಿ ಉಳಿಯುವ, ಸಮಾಜ ಹೆಮ್ಮೆ ಪಡುವಂತಹ ಸತ್ಕಾರ್ಯಗಳು ವಿದ್ಯಾಸಂಸ್ಥೆಗಳಿಂದ ಆಗಬೇಕು ಎಂದು ಆಶಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ 3 ದಶಕಗಳ ಕಾಲ ಶಾಸಕರಾಗಿ, ಸಚಿವನಾಗಿ ಅಧಿಕಾರವನ್ನು ಅನುಭವಿಸಿದ್ದೇನೆ. ಆದರೆ ಅಧಿಕಾರವನ್ನು ಯಾವತ್ತೂ ಸ್ವಾರ್ಥಕ್ಕಾಗಿ, ಲಾಭದ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡಿಲ್ಲ. ಎಷ್ಟೇ ಆಮಿಷಗಳು ಬಂದಿದ್ದರೂ ಪಕ್ಷ ನಿಷ್ಠೆಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ
ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್, ನಮ್ಮ ಮತ್ತು ಎಸ್.ಎ. ರವೀಂದ್ರ ನಾಥ್‍ರವರ ಸಂಬಂಧ ಸುಮಾರು 40 ವರ್ಷ ಗಳದ್ದು. ಅವರು ರಾಜಕೀಯವಾಗಿ, ಸಾಮಾಜಿಕ ವಾಗಿ ಸಲ್ಲಿಸಿರುವ ಸೇವೆಗಾಗಿ ನಾವು ಹೊಸದಾಗಿ ನಿರ್ಮಿಸಿರುವ ಮಕ್ಕಳ ಕ್ರೀಡಾಂಗಣಕ್ಕೆ ಅವರ ಹೆಸರನ್ನಿಡುವ ಮೂಲಕ ಗೌರವವನ್ನು ಸಲ್ಲಿಸಿದ್ದೇವೆ ಎಂದರು. ಕ್ರೀಡಾಂಗಣದ ಆವರಣದಲ್ಲಿರುವ ಭಾರತ ಮಾತೆಯ ಭಾವಚಿತ್ರವನ್ನು ವಿಧಾನ ಪರಿಷತ್ ಸದಸ್ಯ ಮಾಜಿ ಎ.ಎಚ್. ಶಿವಯೋಗಿಸ್ವಾಮಿ ನೆರವೇರಿಸಿದರು.
ಎಸ್.ಎ. ರವೀಂದ್ರನಾಥ್ ಅವರ ಜೀವನದ ಪ್ರಮುಖ ಘಟನೆಗಳನ್ನು ದಾಖಲಿಸಿರುವ ಪುಸ್ತಕದ ಮುಖಪುಟವನ್ನು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಬಿಡುಗಡೆ ಮಾಡಿದರು.
ಮುಂಬರುವ ಫೆಬ್ರವರಿ ತಿಂಗಳಲ್ಲಿ ಪುಸ್ತಕ ಬಿಡುಗಡೆಗೆ ಸಿದ್ಧವಾಗಲಿದ್ದು, ಪುಸ್ತಕವನ್ನು ಪತ್ರಕರ್ತ ಯಳನಾಡು ಮಂಜು ಮತ್ತು ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಸಿದ್ಧಪಡಿಸುತ್ತಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸೋಮೇಶ್ವರ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಆರ್. ಅಶೋಕರೆಡ್ಡಿ ವಹಿಸಿದ್ದರು.
ಕು|| ರಮ್ಯಾ ಕೆ.ಎಸ್., ಬಾಲಪ್ರತಿಭೆ ಅವರು ಎಸ್.ಎ. ರವೀಂದ್ರನಾಥ್‍ರವರ ಕುರಿತಾಗಿ ಅಭಿನಂದನಾ ನುಡಿಗಳ ಮೂಲಕ ಗೌರವ ಸಮರ್ಪಿಸಿದರು.
ಶಿವಸ್ತುತಿಯ ಮೂಲಕ ವಿದ್ಯಾಲಯದ ಶಿಕ್ಷಕಿಯರಾದ ಹೇಮಾ ಬಿ. ಮತ್ತು ರೇಖಾ ಎಂ. ಪ್ರಾರ್ಥನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಮಹಾಪೌರ ಬಿ.ಜೆ. ಅಜಯ್‍ಕುಮಾರ್, ಮಾಜಿ ಶಾಸಕ ಎಂ. ಬಸವ ರಾಜ ನಾಯ್ಕ, ಮಹಾನಗರ ಪಾಲಿಕೆ ಸದಸ್ಯರು ಗಳಾದ ಕೆ.ಎಂ. ವೀರೇಶ್, ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ ಎನ್.ಹನುಮಂತನಾಯ್ಕ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯ ಶಿಕ್ಷಕಿಯರಾದ ಎನ್. ಪ್ರಭಾವತಿ, ಪಿ.ಹೆಚ್. ವೀಣಾ, ಡಿಡಿಪಿಐ ಪರಮೇಶ್ವರಪ್ಪ, ಬಿಇಓ ಸಿದ್ದಪ್ಪ, ಯಲ್ಲಮ್ಮ, ರಕ್ಷಣಾ ವೇದಿಕೆಯ ಶಿವಕುಮಾರ್, ಶಿಕ್ಷಕಿಯರಾದ ಗಾಯತ್ರಿ, ಪಿ. ಮಾಲಾ, ಶಿಕ್ಷಕ ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.