ಕೊಟ್ಟೂರಿನಲ್ಲಿ 11.24 ಕೋ.ರೂ.ಗಳ ಅಭಿವೃದ್ಧಿ ಯೋಜನೆ

ಕೊಟ್ಟೂರು, ನ.27 – ಪಟ್ಟಣದ ಅಭಿವೃದ್ಧಿಗೆ 11.24 ಕೋಟಿ ರೂ.ಗಳ ಅನುದಾನವನ್ನು ಕೊಟ್ಟೂರು ಜನತೆಗೆ ನೀಡಿರುವುದಾಗಿ ಶಾಸಕ ಎಸ್.ಭೀಮಾನಾಯ್ಕ ತಿಳಿಸಿದ್ದಾರೆ.

ಪಟ್ಟಣದ ಕಾಂಗ್ರೆಸ್ ಮುಖಂಡ ಪಿ.ಸುಧಾಕರ ಗೌಡ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಪಟ್ಟಣದ ಅರಬಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿ ರಸ್ತೆಯ ನಿರ್ಮಾಣಕ್ಕೆ 3 ಕೋಟಿ ರೂ., ಎಕ್ಕುಂಬಿ- ಮೊಳಕಾಲ್ಮೂರು ಹೆದ್ದಾರಿಯನ್ನು ಅಭಿವೃದ್ದಿ ಪಡಿಸಲು 3.43 ಕೋಟಿ ರೂ., 21 ಲಕ್ಷ ರೂ ವೆಚ್ಚದಲ್ಲಿ ಪಶು ಆಸ್ಪತ್ರೆ ನಿರ್ಮಾಣ, 50 ಲಕ್ಷ ರೂ ವೆಚ್ಚದ ಯಾತ್ರಿ ನಿವಾಸ ಮತ್ತಿತರ ಕಾಮಗಾರಿಗಳಿಗೆ ಭೂಮಿ ಪೂಜೆಯ ಮೂಲಕ ಚಾಲನೆ ನೀಡಿರುವುದಾಗಿ  ಹೇಳಿದರು.

ಸಂಸದ ವೈ.ದೇವೇಂದ್ರಪ್ಪ ಯಾವುದೇ ಅನುದಾನವನ್ನು ಜಿಲ್ಲಾಭಿವೃದ್ಧಿಗೆ ತರದೇ ಕೇವಲ ಶಾಸಕರುಗಳ ಅನುದಾನಡಿ ನಿರ್ಮಾಣಗೊಂಡ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರಿಗೆ ನಿಜವಾದ ಜನತೆಯ ಕಾಳಜಿ ಇದ್ದರೆ ಅನುದಾನವನ್ನು ಸರ್ಕಾರದ ಮೇಲೆ ಒತ್ತಡ ಹೇರಿ ತರಲಿ ಎಂದು ಅವರು ಸವಾಲು ಹಾಕಿದರು.

ಮುಂಬರುವ ದಿನಗಳಲ್ಲಿ ಕೊಟ್ಟೂರು ಪಟ್ಟಣಕ್ಕೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಿ ತರುತ್ತೇನೆ. ಒಳ ಚರಂಡಿ ಯೋಜನೆಗೆ ಅನುಮೋದನೆ ದೊರಕಿಸುವುದು, ಪಟ್ಟಣವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಮತ್ತಷ್ಟು ಒತ್ತಡ ಹೇರುತ್ತೇನೆ ಎಂದು ಭರವಸೆ ನೀಡಿದರು.

error: Content is protected !!