ಡಾ. ಟಿ.ಬಿ. ಸೊಲಬಕ್ಕನವರ ಸಾಂಸ್ಕೃತಿಕ ರಾಯಭಾರಿಯಾಗಿದ್ದರು : ಬಾಮ ಕಂಬನಿ

ದಾವಣಗೆರೆ, ನ.27- ಕಲಾವಿದರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಜನಪರ ಮತ್ತು ಜೀವಪರ ಕಾಳಜಿಯ ಹೋರಾಟಗಾರರಾಗಿದ್ದ ಬಯಲಾಟ ಅಕಾಡೆಮಿ ಅಧ್ಯಕ್ಷ, ನಿವೃತ್ತ ಕಲಾ ಪ್ರಾಧ್ಯಾಪಕ ಡಾ. ಟಿ.ಬಿ. ಸೊಲಬಕ್ಕನವರ ನಿಧನ ರಾಷ್ಟ್ರಕ್ಕೆ ತುಂಬಲಾಗದ  ನಷ್ಟವಾಗಿದೆ ಎಂದು ಹಿರಿಯ ಸಾಹಿತಿ ಮತ್ತು ಸೊಲಬಕ್ಕನವರ ಒಡನಾಡಿ ಬಾ.ಮ. ಬಸವರಾಜಯ್ಯ ಹೇಳಿದರು.

ನಗರದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಮೊನ್ನೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೊಲಬಕ್ಕನವರದು ಅಪರೂಪದ ವ್ಯಕ್ತಿತ್ವ. ಜನಹಿತದ ಕಾರ್ಯಗಳಿಗೆ ಸದಾ ತುಡಿಯುತ್ತಿದ್ದ ಅವರ ಮನಸ್ಸು, ಅನ್ಯಾಯ-ಅಕ್ರಮಗಳನ್ನು ಎಂದಿಗೂ ಸಹಿಸುತ್ತಿರಲಿಲ್ಲ. ನೇರ ನಿಷ್ಠೂರವಾದಿ. ಆದರೆ ಮನಸ್ಸು ಮೃದು. ಯಾವುದೇ ಸಮಸ್ಯೆಗೆ ಸ್ಪಂದಿಸಿ, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಕಲೆ, ಕಲಾವಿದರು, ಪರಿಸರದ ಜೊತೆ ಬಯ ಲಾಟ ಅವರ ಆಸಕ್ತಿಯ ಕ್ಷೇತ್ರ. ಅದನ್ನು ಅವರು ಉಸಿರಾಗಿಸಿಕೊಂಡಿದ್ದರು ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ಮಹಾಲಿಂಗಪ್ಪ ಮಾತನಾಡಿ, ನಡೆ-ನುಡಿ ಒಂದಾಗಿಸಿಕೊಂಡು ವೃತ್ತಿ ನಿರ್ವಹಿಸಿದ ಸೊಲಬಕ್ಕನವರ ಆತ್ಮೀಯ ಭಾವದ ಸ್ನೇಹಜೀವಿ. ಮೇಲು-ಕೀಳುಗಳ ಭೇದಭಾವ ತೋರದೆ ಎಲ್ಲರನ್ನೂ ಒಪ್ಪಿಕೊಳ್ಳುತ್ತಿದ್ದರು ಎಂದರು.

ನಿವೃತ್ತ ಪ್ರಾಧ್ಯಾಪಕ ಬಿ.ಆರ್. ಕೊರ್ತಿ ಮಾತನಾಡಿ, ಡಾ. ಸೊಲಬಕ್ಕನವರ ಜೊತೆ ಸಹಪಾಠಿಯಾಗಿ, ಸ್ನೇಹಿತನಾಗಿ ಕೆಲಸ ಮಾಡಿದ್ದೇ ವಿಶೇಷ ಅನುಭವ. ಅವರೊಬ್ಬ ಸ್ಫೂರ್ತಿಯ ಚೇತನವಾಗಿದ್ದರು ಎಂದು ನುಡಿದರು.

ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗುಪ್ಪಿ, ಯುವ ಪ್ರತಿಭೆಗಳು ಕ್ರಿಯಾಶೀಲರಾಗಿ ಕೆಲಸ ಮಾಡುವ ಯಾರೇ ಆಗಿದ್ದರೂ ಹುಡುಕಿ ಪ್ರೋತ್ಸಾಹಿಸುತ್ತಿದ್ದರು. ಸದಾ ಅವರ ಬೆನ್ನೆಲುಬಾಗಿ ನಿಂತು ಸಹಾಯ ಹಸ್ತ ಚಾಚುತ್ತಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಾವಿವಿ ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ಸೊಲಬಕ್ಕನ ವರ ಕೇವಲ ವ್ಯಕ್ತಿಯಾಗಿರದೆ, ಬಹು ದೊಡ್ಡ ಶಕ್ತಿ ಯಾಗಿದ್ದರು. ಅವರು ನಡೆ, ನುಡಿ, ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಅವರಿಗೆ ಗೌರವ ನೀಡುವ ಕೆಲಸ ವನ್ನು ವಿಶ್ವವಿದ್ಯಾನಿಲಯ ಮಾಡಲಿದೆ ಎಂದರು.

ಪ್ರಾಚಾರ್ಯ ಡಾ. ರವೀಂದ್ರ ಕಮ್ಮಾರ ಸ್ವಾಗತಿಸಿ, ಅವರ ಜೊತೆಗಿನ ಒಡನಾಟ ಸ್ಮರಿಸಿದರು.

error: Content is protected !!