ದಾವಣಗೆರೆ, ನ. 27 – ಮನೆ ಗೆದ್ದು , ಮಾರು ಗೆಲ್ಲಬೇಕು, ಮನೆಯಲ್ಲಿರುವ ಹಿರಿಯರನ್ನು ಗೌರವಿಸಬೇಕು, ಹೆತ್ತವರ ಮನಸ್ಸು ಗೆದ್ದು , ಸಮಾಜದಲ್ಲಿಯೂ ಒಳ್ಳೆಯ ಹೆಸರು ಗಳಿಸಬೇಕು ಎಂದು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆ ಆವರಣದಲ್ಲಿ ಸಮಾನ ಮನಸ್ಕರ ಸೇವಾ ಸಮಿತಿಯ ಪ್ರಥಮ ವಾರ್ಷಿಕೋ ತ್ಸವದ ಅಂಗವಾಗಿ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದ ಮಕ್ಕಳಿಗೆ ‘ಕನ್ನಡ ಕೀರ್ತಿ ಕಳಸ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಯನ್ನು ಹೊಂದಿದಾಗ ಮಾತ್ರ ಯಶಸ್ಸು ಗಳಿ ಸಲು ಸಾಧ್ಯ ಎಂದು ಪ್ರತಿಪಾದಿಸಿದರು. ಶ್ರದ್ಧೆ, ಪರಿಶ್ರಮ, ಛಲ, ಬದ್ಧತೆಯನ್ನು ಮೈಗೂಡಿಸಿ ಕೊಳ್ಳಬೇಕು, ಗುರು- ಹಿರಿಯರು, ಶಿಕ್ಷಕರು ಹೇಳಿದಂತೆ ನಡೆಯಬೇಕು ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಹಳೇಬೀಡು ರಾಮ ಪ್ರಸಾದ್ ಅವರು, ಅಂಕ ಗಳಿಕೆಯೇ ಇಂದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದೇ ಪ್ರಾಮುಖ್ಯತೆಯಾಗಿದೆ ಎಂದರು.
ಕನ್ನಡ ಚಳುವಳಿಯ ಹಿರಿಯ ಮುಖಂಡ ಬಸವರಾಜ ಐರಣಿ ಅವರು, ವಿದ್ಯಾರ್ಥಿಗಳು ತಮ್ಮ ಪಠ್ಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳ ಬೇಕೆಂದು ಕರೆ ನೀಡಿದರು.
ಶ್ರೀ ಸಿದ್ದಗಂಗಾ ಶಾಲೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೌಜಾ ಅವರು, ಇಂದು ಮಕ್ಕಳಿಗೆ ಆನ್ ಲೈನ್ ಬೋಧನೆ ನೋಡಲು ಮೊಬೈಲ್ ಬಳಕೆಯಿಂದ ಕಣ್ಣಿಗೆ ತೊಂದರೆಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ ಎಂದರು.
ಐಸಿರಿ ಪ್ರಾರ್ಥಿಸಿದರು. ಸಮಾನ ಮನಸ್ಕರ ಸೇವಾ ಸಮಿತಿಯ ಖಜಾಂಚಿ ಅಜ್ಜೇಶಿ ಸ್ವಾಗತಿಸಿದರು ಸಮಿತಿಯ ಗೌರವಾಧ್ಯಕ್ಷ ಬಕ್ಕೇಶ್ ನಾಗನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ ಶೆಣೈ ನಿರೂಪಿಸಿದರು. ಸಮಿತಿಯ ಸಹ ಕಾರ್ಯದರ್ಶಿ ಲೋಕೇಶ್ ವಂದಿಸಿದರು.
ಈ ಕಾರ್ಯಕ್ರಮವನ್ನು ಕಲಾಕುಂಚ ಮತ್ತು ಸಿದ್ದಗಂಗಾ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಸಾಹೇಬ್ ವಹಿಸಿದ್ದರು. ಕಲಾಕುಂಚ ಸಂಸ್ಥೆಯ ಅಧ್ಯಕ್ಷ ಕೆ.ಹೆಚ್. ಮಂಜುನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ಸೇವಾ ಸಮಿತಿಯ ಪದಾಧಿಕಾರಿಗಳಾದ ಬಂಕಾಪುರದ ಚೆನ್ನಬಸಪ್ಪ, ವಿಜಯಕುಮಾರ ಶೆಟ್ಟಿ, ಎಂ ಪಿ ಕುಮಾರ್, ಶ್ರೀಮತಿ ಶೈಲಾ ವಿಜಯಕುಮಾರ್, ಶ್ರೀಮತಿ ನಿರ್ಮಲಾ ಮೃತ್ಯುಂಜಯ, ಶ್ರೀಮತಿ ಕೆ.ಎಂ. ಚಂದ್ರಮ್ಮ, ಶ್ರೀಮತಿ ಜಿ ಜಯಮ್ಮ ಮತ್ತಿತರರು ಭಾಗವಹಿಸಿದ್ದರು.