ಕಲ್ಲೇರುದ್ರೇಶ್ ಮನವಿ
ಜಗಳೂರು, ನ.27- ಭದ್ರಾ ಮೇಲ್ದಂಡೆ ಯೋಜನೆಯಡಿ ನಿಗದಿಯಾಗಿರುವ 2.4 ಟಿಎಂಸಿ ನೀರು ಮೊದಲ ಪ್ರಾಶಸ್ತ್ಯದಲ್ಲಿ ಜಗಳೂರು ತಾಲ್ಲೂಕಿಗೆ ಮೀಸಲಿಟ್ಟು, ತದನಂತರ ಬೇರೆಡೆಗೆ ಹರಿಸಬೇಕು ಎಂದು ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಸದಸ್ಯ ಕಲ್ಲೇರುದ್ರೇಶ್ ಮನವಿ ಮಾಡಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವಧಿಯಲ್ಲಿ ಅನುಮೋದನೆಯಾಗಿ, ಸಿದ್ದರಾಮಯ್ಯನವರ ಮುಖ್ಯಮಂತ್ರಿ ಅವಧಿಯಲ್ಲಿ ಬಜೆಟ್ನಲ್ಲಿ ಘೋಷಿಸಿ 2.4 ಟಿಎಂಸಿ ನೀರು ಹಂಚಿಕೆ ಮಾಡಲು ತಜ್ಞರ ಸಮಿತಿಯೊಂದಿಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವನ್ನು ಕೈಗೊಂಡು ವಿಶ್ವೇಶ್ವರ ಜಲನಿಗಮ ನಿಯಮಿತ ಇಂಜಿನಿಯರ್ಗಳಿಗೆ ಸೂಚಿಸಲಾಗಿತ್ತು. ಇದೀಗ ನೆರೆಹೊರೆ ತಾಲ್ಲೂಕುಗಳು ಜಗಳೂರಿಗೆ ಹಂಚಿಕೆಯಾಗಿರುವ ನೀರನ್ನು ತಮ್ಮ ಕಡೆ ವರ್ಗಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ನಮಗೆ ಅವರ ಬಗ್ಗೆ ವಿರೋಧವಿಲ್ಲ.
ಹಿಂದುಳಿದ ತಾಲ್ಲೂಕಿಗೆ ಸರ್ಕಾರ ನಿಗದಿಪಡಿಸಿರುವಂತೆ 2.4 ಟಿಎಂಸಿ ನೀರು ಮೊದಲು ನಮಗೆ ಬಿಡಲಿ. ನಂತರ ಅವರಿಗೆ ಕೊಡಲಿ ಎಂಬುದು ನಮ್ಮ ಹೋರಾಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಮಾಧವರೆಡ್ಡಿ, ಷಂಷುದ್ದೀನ್, ಪಪಂ ಸದಸ್ಯ ಮಹಮ್ಮದ್ ಅಲಿ ಉಪಸ್ಥಿತರಿದ್ದರು.