ದಾವಣಗೆರೆ, ನ.26- ನಗರದ ಶಾಮ ನೂರು ರಸ್ತೆಯ ಬಿಐಇಟಿ ಕಾಲೇಜಿನ ಎದುರು ಇರುವ ಅಖಿಲ ಭಾರತ ವೀರಶೈವ ಮಹಾ ಸಭಾದ 10 ಸಾವಿರ ಚದುರಡಿ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣದ ಕಾರ್ಯ ಶೀಘ್ರವೇ ಆರಂಭವಾಗಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ತಿಳಿಸಿದ್ದಾರೆ.
ನಗರದ ಶ್ರೀ ಶ್ರೀಶೈಲ ಮಠದ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ನಗರ ಮಹಿಳಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವೀರಶೈವರ ಸಂಘಟನೆ ಇಂದು ಬಲ ಗೊಳ್ಳುತ್ತಿದೆ. ವೀರಶೈವರೂ, ಲಿಂಗಾಯತರೂ ಬೇರೆ ಬೇರೆ ಅಲ್ಲ, ಎರಡೂ ಒಂದೇ. ಆದರೆ, ಕೆಲವರು ವೀರಶೈವರು, ಲಿಂಗಾಯತರು ಬೇರೆ ಬೇರೆ ಎಂದು ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಶೈವ ಮಹಾಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ ಅವರು ಮಾತನಾಡಿ, ಮಹಿಳೆಯರು ಸಂಘಟಿತರಾಗಿ ವೀರಶೈವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ಉತ್ಸಾಹದಿಂದ ಮಾಡಬೇಕೆಂದು ಕರೆ ನೀಡಿದರು.
ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಮಹಾಪೌರ ಬಿ.ಜಿ.ಅಜಯ್ಕುಮಾರ್ ಅವರು, ವೀರಶೈವ ಮಹಾ ಸಭಾದ ಕಾರ್ಯಕ್ರಮಗಳನ್ನು ನಡೆಸಲು ಕಚೇರಿಯನ್ನು ತೆರೆಯಲು ಮಳಿಗೆಯನ್ನು ಬಾಡಿಗೆ ಪಡೆದರೆ ತಾವು ಒಂದು ವರ್ಷದ ಬಾಡಿಗೆಯನ್ನು ಕೊಡುವುದಾಗಿ ಭರವಸೆ ನೀಡಿದರು.
ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ವೀರಶೈವ ಲಿಂಗಾಯ ತರು ಅಭಿವೃದ್ಧಿ ನಿಗಮ ಸ್ಥಾಪನೆಯಾಗಿರುವುದ ರಿಂದ ಇದರ ಸದುಪಯೋಗವನ್ನು ಸಮಾಜದ ವರು ಪಡೆದು, ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಹಿಳೆಯರಲ್ಲಿ ಧಾರ್ಮಿಕ ಮನೋಭಾವ ಹೆಚ್ಚಾಗಿದ್ದು, ತಮ್ಮ ಮಕ್ಕಳಿಗೆ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳು ವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು. ಮಕ್ಕಳಲ್ಲಿ ಧಾರ್ಮಿಕ ಆಚಾರ-ವಿಚಾರಗಳನ್ನು ಬೆಳೆಸಿ, ಅವರಿಗೆ ಉತ್ತಮ ಸಂಸ್ಕಾರ ನೀಡಬೇಕೆಂದು ತಿಳಿಸಿದರು.
ವೀರಶೈವ ಮಹಾಸಭಾದ ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಪುಷ್ಪ ವಾಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ವಿನುತ ರವಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಉಮಾ ರಮೇಶ್, ಜಿ.ಪಂ. ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್, ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಟಿ.ವೀರೇಶ್, ಶ್ರೀಮತಿ ಗೌರಮ್ಮ ಗಿರೀಶ್, ಸೋಗಿ ಆರ್.ಶಾಂತ ಕುಮಾರ್, ವೀಣಾ ನಂಜಣ್ಣ, ಶಿವನಗೌಡ ಟಿ.ಪಾಟೀಲ್, ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಶ್ರೀಶೈಲ ಮಠದ ಎಂ.ಬನ್ನಯ್ಯ ಸ್ವಾಮಿ, ಕೆ.ಎಂ.ಪರಮೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಮಂಜುಳಾ ಇಟಗಿ ಪ್ರಾರ್ಥಿಸಿದರು. ರೂಪಾ ಶಿವಕುಮಾರ್ ಸ್ವಾಗತಿಸಿದರು. ಮಂಗಳಾ ಕರಿಬಸಪ್ಪ ನಿರೂಪಿಸಿದರು.