ಸವಲತ್ತು ತಲುಪದಿರುವುದು ಕಂಡರೆ ಕ್ರಮ

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಎಚ್ಚರಿಕೆ

ದಾವಣಗೆರೆ, ನ. 25- ಸರ್ಕಾರದ ಎಲ್ಲಾ ಇಲಾಖೆಯ ಸವಲತ್ತುಗಳೂ ಅರ್ಹ ಪ್ರತಿಯೊ ಬ್ಬರಿಗೂ ದೊರಕಬೇಕು. ಒಂದು ವೇಳೆ ಯಾವುದೇ ಇಲಾಖೆಯ ಸವಲತ್ತು ಅರ್ಹರಿಗೆ ತಲುಪದೇ ಇರುವುದು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣ ದಲ್ಲಿಂದು ಎರಡನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸುವಂತೆ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದರು.

ಸರ್ಕಾರದ ಯೋಜನೆಗಳ ಬಗ್ಗೆ ತಾಲ್ಲೂಕು ಮಟ್ಟದ ಇಲಾಖೆ ಗಳಲ್ಲಿ ಪ್ರಚಾರದ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಎಲ್ಲಾ ಯೋಜನೆಗಳು ನಿಗದಿತ ಕಾಲಮಿ ತಿಯೊಳಗೆ ಅನುಷ್ಠಾನವಾಗಬೇಕು. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಗಳಿಗೆ ಚುನಾವಣೆ ಘೋಷಣೆ ಯಾಗಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಯೋಜನೆಗಳಿಗೆ ಸಂಬಂಧಿಸಿದ ಅನುದಾನ ಖರ್ಚಾಗದೆ, ವಾಪಸ್ ಹೋದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಹೇಳಿದರು.

ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಪಿ.ಎಂ. ಕಿಸಾನ್ ಯೋಜನೆ ಹಣ ಹಾಗೂ ಮೆಕ್ಕೆಜೋಳ ಬೆಳೆದ ರೈತರಿಗೆ ನೀಡಲಾಗುವ 5 ಸಾವಿರ ರೂ. ಆರ್ಥಿಕ ನೆರವಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ರೈತರ ಪಟ್ಟಿ ಮಾಡಿ ಪ್ರತಿಯೊಬ್ಬರಿಗೂ ಹಣ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಮೆಕ್ಕೆಜೋಳ ಬೆಳೆದ, ಏಕ ಮಾಲೀಕತ್ವದ ಎಲ್ಲಾ ರೈತರಿಗೂ 5 ಸಾವಿರ ರೂ. ಹಣವನ್ನು ಖಾತೆಗಳಿಗೆ ಜಮೆ ಮಾಡಲಾಗಿದೆ. ಜಂಟಿ ಖಾತೆ ಇರುವಲ್ಲಿ ಸ್ವಲ್ಪ ತಡವಾಗಿದೆ. ಇದೀಗ ಸರ್ಕಾರ ಜಂಟಿ ಖಾತೆಗಳಿಗೂ ಹಣ ನೀಡಲು ತಿಳಿಸಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಫ್ಲೋರೈಡ್ ಕುರಿತು ಸಮಗ್ರ ವರದಿಗೆ ಸೂಚನೆ: ಹರಿಹರ, ಹೊನ್ನಾಳಿಯಲ್ಲಿ ಫ್ಲೋರೈಡ್ ಯುಕ್ತ ನೀರು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿರುವ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಫರ್ಟಿಲೈಜರ್ ಹಾಗೂ ಫೆಸ್ಟಿಸೈಡ್ ಕಂಪನಿಗಳು ಫ್ಲೋರೈಡ್ ಯುಕ್ತ ನೀರನ್ನು ನದಿಗೆ ಬಿಡುವುದರಿಂದ ಸಮಸ್ಯೆ ಉಂಟಾಗಿದೆ ಎಂದರು. ಫ್ಲೋರೈಡ್ ಅಂಶ ಇರುವೆಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸರ್ಕಾರ ಅನುಮತಿಸಿದ್ದು, ಘಟಕಗಳನ್ನು ಆರಂಭಿಸಲಾಗುವುದು ಎಂದರು. ಸಚಿವ ಭೈರತಿ, ಫ್ಲೋರೈಡ್ ಬಗ್ಗೆ ಮತ್ತೊಮ್ಮೆ ವೈದ್ಯರು, ಅಧಿಕಾರಿಗಳೊಂದಿಗೆ ಪರಿಶೀಲಿಸಿ  ಸಮಗ್ರ ವರದಿ ನೀಡುವಂತೆ ಸೂಚಿಸಿದರು.

ಜಲಜೀವನ್‌ಗೆ 370 ಗ್ರಾಮ ಆಯ್ಕೆ:  ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಕೊಡಲು ಈ ವರ್ಷ 370 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.  150 ಗ್ರಾಮಗಳಿಗೆ ಪ್ರಸ್ತಾವನೆ ಸಿದ್ಧವಾಗಿದೆ.  ಸದ್ಯ 49 ಗ್ರಾಮಗಳಿಗೆ ಟೆಂಡರ್ ಕರೆಯಲಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಜಿ.ಪಂ. ಸಿಇಒ ಪದ್ಮಾ ಮಾಹಿತಿ ನೀಡಿದರು.

ಅಧಿಕಾರಿ ಸಸ್ಪೆಂಡ್: ಅಲ್ಪಸಂಖ್ಯಾತರ ನಿಗಮದ ಅಧಿಕಾರಿ ಇಂದು ಹಾಗೂ ಹಿಂದಿನ ಸಭೆಗಳಿಗೆ ಹಾಜರಾಗದ ಕಾರಣ ಅಸಮಾಧಾನಗೊಂಡ ಸಚಿವರು ಅಧಿಕಾರಿಯನ್ನು ಅಮಾನತ್ತು ಗೊಳಿಸುವಂತೆ ಆದೇಶಿಸಿದರು.

ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಮಾಡಾಳ್ ವಿರುಪಾಕ್ಷಪ್ಪ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ, ಎಎಸ್ಪಿ ರಾಜೀವ್ ಇತರರಿದ್ದರು.

error: Content is protected !!