ಕೊಟ್ಟೂರು, ನ.24- ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ಬಿಡುಗಡೆ ಮಾಡಿ ಆರೇಳು ತಿಂಗಳಲ್ಲಿ ಅರ್ಧಕ್ಕೆ ನಿಂತಿರುವ ಸಮುದಾಯ ಭವನ ಪೂರ್ಣಗೊಳಿಸಿ, ನಾನೇ ಉದ್ಘಾಟನೆ ಮಾಡಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಿಗೆ ಕೀಲಿ ಕೀ ಕೊಡುತ್ತೇನೆ ಎಂದು ಶಾಸಕ ಭೀಮನಾಯ್ಕ ಭರವಸೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ನಿವೃತ್ತ ನೌಕರರ ಸಂಘದ ನವೀಕೃತ ಕಟ್ಟಡ ಉದ್ಘಾಟಿಸಿ, 75 ವರ್ಷ ಮೇಲ್ಪಟ್ಟ 31 ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನಿಸಿ, ಮಾತನಾಡಿದರು.
ಹಗರಿಬೊಮ್ಮನಹಳ್ಳಿ ಕ್ಷೇತ್ರದ 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕಳೆದ ಸಮ್ಮಿಶ್ರ ಸರ್ಕಾರ 300 ಕೋಟಿ ರೂ. ಅನುದಾನ ಕಾಯ್ದಿರಿ ಸಿದೆ. ಆದರೆ, ನಾನು ಕಾಂಗ್ರೆಸ್ ಶಾಸಕನೆಂಬ ಒಂದೇ ಕಾರಣಕ್ಕೆ ಬಿಜೆಪಿ ಸರ್ಕಾರ ಆ ದಾಖಲೆ ಗಳನ್ನು ಮೂಲೆಗಿಟ್ಟಿದೆ ಎಂದು ಬಿಜೆಪಿ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿದರು.
ನಾನು ಜೆಡಿಎಸ್ ಶಾಸಕನಾಗಿದ್ದಾಗ, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಎಂದೂ ನನ್ನನ್ನು ಬೇರೆ ಪಕ್ಷದ ಶಾಸಕನೆಂದು ನೋಡದೆ, ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದ್ದರು. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿ 15 ತಿಂಗಳಾಗಿದ್ದು, ಕ್ಷೇತ್ರಕ್ಕೆ ನಯಾ ಪೈಸೆ ಬಿಡುಗಡೆ ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆ ಭಾರತಿ ಸುಧಾಕರಗೌಡ, ನಿವೃತ್ತ ನೌಕರ ಶೇಖರಗೌಡ ಪಾಟೀಲ್ ರಚಿಸಿರುವ ಮನದ ಮಿಂಚು ಪುಸ್ತಕವನ್ನು ಬಿಡುಗಡೆ ಮಾಡಿದ್ದಲ್ಲದೆ, ನಿವೃತ್ತ ನೌಕರರ ನವೀಕೃತ ಕಟ್ಟಡದಲ್ಲಿನ ಗ್ರಂಥಾಲಯವನ್ನು ಉದ್ಘಾಟಿಸಿದರು.
ಇದಕ್ಕೂ ಪೂರ್ವದಲ್ಲಿ ನಿವೃತ್ತರ ಸಂಘದ ಕುರಿತು ಮಹಾಬಲೇಶ್ವರಪ್ಪ, ನಂಜುಂಡಪ್ಪ, ಮಂ ಜುನಾಥ, ಶಿವಾನಂದಸ್ವಾಮಿ, ಸಿದ್ದಯ್ಯ ಸ್ವಾಮಿ, ನೀಲಪ್ಪ, ಸೋಬಟಿ ಮತ್ತಿತರರು ಮಾತನಾಡಿದರು.
ಪಪಂ ಉಪಾಧ್ಯಕ್ಷ ಷಫಿಉಲ್ಲಾ, ಪಪಂ ಸದಸ್ಯರಾದ ತೋಟದ ರಾಮಣ್ಣ, ಜಗದೀಶ, ಅಕ್ಕಿ ತೋಟೇಶ್, ತಾ.ಪಂ. ಇಒ ವಿಶ್ವನಾಥ್, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ವಿ. ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಪ.ಪಂ. ಮಾಜಿ ಅಧ್ಯಕ್ಷ ಅನಿಲ್ ಹೊಸಮನಿ ಮತ್ತಿತರರು ವೇದಿಕೆಯಲ್ಲಿದ್ದರು.
ಕೊಟ್ಟೂರು ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿದರು. ನಿವೃತ್ತ ಸಿಡಿಪಿಒ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾಕರ ನಿರೂಪಿಸಿದರು. ಎಂ. ಮಲ್ಲಿಕಾರ್ಜುನ ಸ್ವಾಗತಿಸಿದರು.