ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ : ತಾ.ಪಂ. ಸದಸ್ಯರಿಂದ ಆರೋಪ

ರಾಣೇಬೆನ್ನೂರು, ನ.24-  ಗ್ರಾಮ ಪಂಚಾಯ್ತಿಗಳಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಿದ ತಾ.ಪಂ. ಸದಸ್ಯರು, ಈ ಬಗ್ಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ  ಇಂದು ನಡೆದ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಒತ್ತಡ ಹೇರಿದರು.

ಕಾಮಗಾರಿ ಮಾಡದೇ ಬಿಲ್ ಮಾಡಲಾಗುತ್ತಿದೆ. ಒಂದೇ ರಸ್ತೆಗೆ ರಿಪೇರಿ ಮಾಡಲಾಗಿದೆ ಎಂದು ಹಲವು ಬಾರಿ ಬಿಲ್ ಹಣ ತೆಗೆದುಕೊಳ್ಳಲಾಗಿದೆ. ಬೇಲೂರು ಪಂಚಾಯ್ತಿ ಕಟ್ಟಡಕ್ಕೆ ಬಣ್ಣ ಹಚ್ಚಲು 77 ಸಾವಿರ ಹಣ ಖರ್ಚು ಹಾಕಲಾಗಿದೆ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು ಎಂದು ಸದಸ್ಯರು ತಮ್ಮ ಪಕ್ಷ ಭೇದ ಮರೆತು ದೂರಿದರು. ನಮ್ಮ ಬಳಿ  ಇದಕ್ಕೆ ಸಂಬಂಧಿಸಿದಂತೆ  ಪುರಾವೆಗಳಿವೆ. ನಮ್ಮದು ಟೈಮ್ ಮುಗಿದಿದೆ. ನಾವು ಮನೆಗೆ ಹೋಗ್ತೇವೆ. ಕೊನೆ ಸಭೆಯಲ್ಲಿ ಅವೆಲ್ಲವುಗಳನ್ನು ನಿಮ್ಮ ಮುಂದೆ ಸುರಿಯುತ್ತೇವೆ ಎಂದು ಇಟಗಿ ಕ್ಷೇತ್ರದ ಸದಸ್ಯ ಬಿಜೆಪಿಯ ಕರಿಯಪ್ಪ  ಗಡುಸಾಗಿಯೇ ಹೇಳಿದರು.

ನಮ್ಮ ಮನೆಗಳಿಗೆ ಬಣ್ಣ ಹಚ್ಚಿದರೆ ಇಪ್ಪತ್ತೋ, ಇಪ್ಪತೈದೋ  ಸಾವಿರದಲ್ಲಿ ಮುಗಿಯುತ್ತೆ. ಗ್ರಾಪಂ ಕಟ್ಟಡಕ್ಕೆ ಎಪ್ಪತ್ತೇಳು ಸಾವಿರದಲ್ಲಿ ಅದೆಂತಹ ಬಣ್ಣ ಹಚ್ಚಿರಬಹುದು ನೀವೇ ನೋಡಿ ಎಂದು ತಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕಾಂಗ್ರೆಸ್ ನ ನೀಲಕಂಠಪ್ಪ ಕುಸಗೂರ ಸಭೆಯ ಗಮನ ಸೆಳೆದರು.

ಕೋವಿಡ್‌ ತಪಾಸಣೆ   ಮಧ್ಯಾಹ್ನ 12 ಗಂಟೆಗೆ ಬಂದು ಮಾಡ್ತಾರೆ. ಇದರಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸಲು ಬರುವ ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ ಎನ್ನುವ ಸದಸ್ಯರ ದೂರುಗಳಿಗೆ,  ಪರೀಕ್ಷೆ ಹಾಗೂ ಸಂಬಂಧಿಸಿದ ದಾಖಲೆಗಳನ್ನು ತಯಾರಿಸಲು ಸಮಯ ಸಾಲದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೂ ನ್ಯಾಯಾಲಯದವರು ಕೊಟ್ಟ ಪಟ್ಟಿಯಲ್ಲಿ ಇರುವವರೆಲ್ಲರ ತಪಾಸಣೆ ಮಾಡಲಾಗುತ್ತೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಸಂತೋಷ ವಿವರಿಸಿದರು. 

ಸಭೆ ಎರಡು ತಾಸು ತಡ: ಕೋರಂ ಗೆ ಬೇಕಾಗಿದ್ದ 12 ಸದಸ್ಯರು ಇಲ್ಲದ್ದರಿಂದ, ಅವಶ್ಯವಿದ್ದ 8 ಸದಸ್ಯರ ಆಗಮನಕ್ಕೆ ಅಧ್ಯಕ್ಷೆ ಗೀತಾ ಲಮಾಣಿ ಹಾಗೂ ಉಪಾಧ್ಯಕ್ಷೆ ಕಸ್ತೂರಿ ಹೊನ್ನಾಳಿ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾಲ ಕಾಯಬೇಕಾಯಿತು.  

ಸಭೆಗೂ ಮೊದಲು ನೂತನವಾಗಿ ಆಯ್ಕೆಯಾದ ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ ಗಂಜಾಮದ ಹಾಗೂ ನೂತನವಾಗಿ ಆಗಮಿಸಿದ ಇಒ ಟಿ.ಆರ್. ಮಲ್ಲಾಡದ ಅವರನ್ನು ಸನ್ಮಾನಿಸಲಾಯಿತು. ಮ್ಯಾನೇಜರ್‌ ಬಸವರಾಜ ಸಿಡೇನೂರ ಕಲಾಪ ನಿರೂಪಿಸಿದರು.

error: Content is protected !!