ಮಸೀದಿ-ದರ್ಗಾಗಳಿಗೆ ಅನುದಾನ

ಹರಿಹರ ಶಾಸಕ ಎಸ್. ರಾಮಪ್ಪ

ಹರಿಹರ, ನ.22- ತಾಲ್ಲೂಕಿನ ಮಸೀದಿ, ಈದ್ಗಾ ಮತ್ತು ದರ್ಗಾಗಳ ಅಭಿವೃದ್ಧಿಗೆ ಸುಮಾರು 2 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ಜಮೀಯತ್ ಆಹ್ಲೆ ಹದೀಸ್ ಈದ್ಗಾ ಟ್ರಸ್ಟ್ 30 ಲಕ್ಷ ರೂ. ವೆಚ್ಚದ ಕಾಂಪೌಂಡ್ ಗೋಡೆಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 

ತಮ್ಮ ಶಾಸಕರ ಅನುದಾನದಲ್ಲಿ 25 ಲಕ್ಷ ರೂ.,  ನಗರಸಭೆ ನಿಧಿಯಿಂದ 5 ಲಕ್ಷ ಸೇರಿ ಒಟ್ಟು 30 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ಗೋಡೆಯ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತದೆ. ಇಲ್ಲಿನ ಸ್ಥಳಕ್ಕೆ  ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶದಿಂದ ಬೋರ್ ಕೊರೆದು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸುಮಾರು 1 ಕೋಟಿ ಅನು ದಾನ ಬಿಡುಗಡೆ ಮಾಡಿಸಿ ಅಲ್ಲಿನ ಮಸೀದಿಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇನ್ನೂ ಅಭಿವೃದ್ಧಿ ಮಾಡುವ ಆಸೆ ಇದೆ. ಆದರೆ,  ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸುಮಾರು 118 ಕೋಟಿ ರೂಪಾಯಿ ಅನುದಾನವನ್ನು ತಡೆಯಲಾಗಿದೆ ಎಂದರು.

ಕೆಲವೊಂದು ಟೆಂಡರ್ ಆಗಿದ್ದ ಕೆಲಸಗಳನ್ನೂ ಸಹ ನಿಲ್ಲಿಸಿದರು. ಇದರಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಮತವನ್ನು ಕೇಳುತ್ತಿಲ್ಲ. ಜನರ ಮಧ್ಯದಲ್ಲಿ ದ್ವೇಷದ ಬೀಜವನ್ನು ಭಿತ್ತಿ ಮತಗಳನ್ನು ಪಡೆಯುವ ಕೆಲಸ ಮಾಡುವುದಕ್ಕೆ ಹೊರಟಿದ್ದಾರೆ. ಮತದಾರರು ಅವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡದೆ ಹೋದರೆ, ನಮಗೆ ಸಂಕಷ್ಟ ತಪ್ಪುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್‌ ಜಬ್ಬಾರ್ ಸಾಬ್ ಮಾತನಾಡಿದರು. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿರಾಜ್ ಆಹ್ಮದ್ ಮಾತನಾಡಿ, ಹರಿಹರ ಕ್ಷೇತ್ರದ ಮಸೀದಿ ಮತ್ತು ದರ್ಗಾಗಳ ಅಭಿವೃದ್ಧಿಗೆ ವಕ್ಫ್ ಬೋರ್ಡ್‌ ವತಿಯಿಂದಲೂ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸಮಿತಿ ಸದಸ್ಯ ಇರ್ಫಾನ್ ಮಾತನಾಡಿ, ಅಲ್ ಹದೀಸ್ ಟ್ರಸ್ಟ್ ಪ್ರಾರಂಭವಾಗಿ 16 ವರ್ಷ ಕಳೆದಿವೆ. ಈ ಸ್ಥಳ ಅಭಿವೃದ್ಧಿಗೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ 9 ಲಕ್ಷ, ನಗರಸಭೆ ಮಾಜಿ ಅಧ್ಯಕ್ಷ ಮರಿದೇವ ಅನುದಾನ 9 ಲಕ್ಷ, ನಗರಸಭೆ ಮಾಜಿ ಸದಸ್ಯ ಹಬೀಬ್ಉಲ್ಲಾ 4 ಲಕ್ಷ ಅನುದಾನ ಬಿಡುಗಡೆ ಮಾಡಿದರು. ನಂತರ ಶಾಸಕ ರಾಮಪ್ಪ ಅವರು ಸಂಪೂರ್ಣವಾಗಿ ಕಾಂಪೌಂಡ್ ಗೋಡೆಯ ನಿರ್ಮಾಣ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೌಲಾನಾ ಸನಾಉಲ್ಲಾ ಸಾಬ್, ಸಮಿತಿ ಅಧ್ಯಕ್ಷ ಗುತ್ತೂರು ನಾಸೀರ್ ಸಾಬ್,  ನಗರಸಭೆ ಸದಸ್ಯರರಾದ ಸೈಯದ್ ಅಬ್ದುಲ್ ಅಲಿಂ, ಮೆಹಬೂಬ್ ಬಾಷಾ, ಕೆ.ಜಿ. ಸಿದ್ದೇಶ್, ಎಂ. ಎಸ್. ಬಾಬುಲಾಲ್, ಇಬ್ರಾಹಿಂ, ಮುಖಂಡರಾದ ಜಾಕೀರ್, ದಾದಾಪೀರ್, ಮರಿದೇವ್, ವಿಜಯ ಮಹಾಂತೇಶ್. ಸೈಯದ್ ಅಬ್ಬಾಸ್ ಹುರುಕಡ್ಲಿ,  ಎಸ್.ಎಮ್. ಜಬೀವುಲ್ಲಾ,  ನಜೀರ್ ಹುಸೇನ್, ಮಾಲತೇಶ್  ಇನ್ನಿತರರಿದ್ದರು.

error: Content is protected !!