ವಾಲ್ಮೀಕಿ ಜಾತ್ರೆಯಿಂದ ಸಮಾಜಕ್ಕೆ ಸಾಂಸ್ಕೃತಿಕ ಬಲ

ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅಭಿಮತ

ಹರಿಹರ, ನ.21- ಅತ್ಯಂತ ಸ್ವಾಭಿಮಾನ ದಿಂದ ಜೀವನ ನಡೆಸುತ್ತಾ ನಾಡಿಗೆ ತನ್ನದೇ ಆದ ಕೊಡುಗೆ ನೀಡಿರುವ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸಂವಿಧಾನಿಕ ಹಕ್ಕುಗಳನ್ನು ಸಕಾಲಕ್ಕೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಇಲ್ಲಿನ ಕಾಳಿದಾಸ ನಗರದಲ್ಲಿರುವ ಸಾರ್ವಜನಿಕ ನಾಯಕ ವಿದ್ಯಾರ್ಥಿ ನಿಲಯದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಬರುವ  ಫೆಬ್ರವರಿ 8 ಮತ್ತು 9 ರಂದು ಜರುಗಲಿರುವ 3ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಇಂದು ಕರೆದಿದ್ದ ತಾಲ್ಲೂಕು ಮಟ್ಟದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ರಾಜ್ಯದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 28 ಜಿಲ್ಲೆಗಳಲ್ಲಿ ನಮ್ಮ ಸಮಾಜವಿದ್ದು, ಗುರುಪೀಠ ಸ್ಥಾಪನೆ ನಂತರ ಸಮಾಜದವರು ಸಂಘಟಿತರಾಗಿ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಎಂದು ಶ್ರೀಗಳು ಹೇಳಿದರು.

ವಾಲ್ಮೀಕಿ – ನಾಯಕ ಸಮಾಜವನ್ನು ಸಾಂಸ್ಕೃತಿಕವಾಗಿ ಇನ್ನಷ್ಟು ಬಲಪಡಿಸುವ ಉದ್ದೇಶ ದಿಂದ ಜಾತ್ರೆ ಪ್ರಾರಂಭಿಸಿದ್ದು, ಹಿಂದಿನ ಎರಡು ಜಾತ್ರೆಗಳು ಯಶಸ್ವಿಯಾಗಿವೆ. 3ನೇ ವರ್ಷದ ಜಾತ್ರೆಯನ್ನು ವಿಶೇಷವಾಗಿ ಹಾಗೂ ಹೆಚ್ಚು ಅರ್ಥಪೂರ್ಣವಾಗಿಸುವ ಉದ್ದೇಶ ಹೊಂದಿದ್ದೇವೆ. 2 ದಿನಗಳ ಜಾತ್ರೆಯಲ್ಲಿ ಧ್ವಜಾರೋಹಣ, ಸಾಮೂಹಿಕ ವಿವಾಹ, ಮಹಿಳಾ ಗೋಷ್ಟಿ, ನೌಕರರ ಸಮಾವೇಶ, ನಾಟಕೋತ್ಸವ, ಬುಡಕಟ್ಟು ಸಮುದಾಯಗಳ ಚರ್ಚೆ, ವಾಲ್ಮೀಕಿ ತೇರು, ಧಾರ್ಮಿಕ ಸಭೆ ಮತ್ತು ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪದಾಧಿಕಾರಿಗಳ ಆಯ್ಕೆ: ಹರಿಹರ ತಾಲ್ಲೂಕಿನಲ್ಲಿ ಕೊಂಡಜ್ಜಿ ಜಿ.ಪಂ. ಕ್ಷೇತ್ರಕ್ಕೆ ಗಂಗನರಸಿ ಹೊನ್ನಪ್ಪ, ಬೆಳ್ಳೂಡಿ ಜಿ.ಪಂ. ಕ್ಷೇತ್ರಕ್ಕೆ ಕೆ. ಬೇವಿನಹಳ್ಳಿ ಬಿ.ಎಂ. ಹಾಲೇಶ್, ಬಾನುವಳ್ಳಿ ಜಿ.ಪಂ. ಕ್ಷೇತ್ರಕ್ಕೆ ದೇವರ ಬೆಳಕೆರೆಯ ಮಹೇಶ್ವರಪ್ಪ, ಹೊಳೆಸಿರಿಗೆರೆ ಜಿ.ಪಂ. ಕ್ಷೇತ್ರಕ್ಕೆ ಜಿಗಳಿಯ ಜಿ. ಆನಂದಪ್ಪ, ಹರಿಹರ ನಗರಕ್ಕೆ ಮೆಣಸಿನಹಾಳ್ ಬಸವರಾಜ್, ಮಲೇಬೆನ್ನೂರು ಪಟ್ಟಣಕ್ಕೆ ಎನ್. ಬಸವರಾಜ್ ಅವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ವಾಲ್ಮೀಕಿ-ನಾಯಕ ಸಮಾಜದ ತಾಲ್ಲೂಕು ಗ್ರಾಮಾಂತರ ಅಧ್ಯಕ್ಷ ಕೆ.ಆರ್. ರಂಗಪ್ಪ, ನಗರ ಅಧ್ಯಕ್ಷ ಕೆ.ಬಿ. ಮಂಜುನಾಥ್, ನಗರಸಭೆ ಸದಸ್ಯರಾದ ದಿನೇಶ್ ಬಾಬು, ಮಾರುತಿ ಬೇಡರ್, ಮುಖಂಡರಾದ ಹಂಚಿನ ನಾಗಣ್ಣ ಸಿದ್ದಪ್ಪ, ಕೊಕ್ಕನೂರಿನ ಕೊಟ್ರಪ್ಪ, ಡಿ. ಸೋಮಶೇಖರ್, ಹನಗವಾಡಿ ಹನುಮಂತಪ್ಪ, ಬಾವಿಕಟ್ಟಿ ಕರಿಬಸಪ್ಪ, ಪಾಳೇಗಾರ್ ನಾಗರಾಜ್, ಫೋಟೋ ಮಧು, ಆಟೋ ಹನುಮಂತ, ರಾಜನಹಳ್ಳಿ ಭೀಮಣ್ಣ, ಮಕರಿ ಪಾಲಾಕ್ಷಪ್ಪ, ಹೆಚ್.ಎಸ್. ದೇವೇಂದ್ರಪ್ಪ, ಶಿಕ್ಷಕರಾದ ವಾಸನ ಮಹಾಂತೇಶ್, ಜಿ.ಆರ್. ನಾಗರಾಜ್, ಕೆ.ಎನ್. ಮಂಜುನಾಥ್, ಹರಗನಹಳ್ಳಿ ರಂಗಪ್ಪ, ಎಳೆಹೊಳೆ ರವೀಂದ್ರ, ಕೆ.ವೈ. ಗಣೇಶ್, ಕೆೆ.ಎನ್. ಬಸವರಾಜ್, ಪತ್ರಕರ್ತ ಜಿಗಳಿ ಪ್ರಕಾಶ್ ಇನ್ನಿತರರಿದ್ದರು.

ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಮಾಜದ ಮುಖಂಡ ಬಾವಿಕಟ್ಟಿ ಜಯದೇವಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

error: Content is protected !!