ದಾವಣಗೆರೆ, ನ. 19 – ಕೊರೊನಾ ಕಾರಣದಿಂದಾಗಿ ಶಿಕ್ಷಣ §ಶೂನ್ಯ ವರ್ಷ’ವಾಗುವ ಸಾಧ್ಯತೆ ತಳ್ಳಿ ಹಾಕಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿದ್ಯಾಗಮವನ್ನು ಇನ್ನಷ್ಟು ಸುಧಾರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಶೂನ್ಯ ಶೈಕ್ಷಣಿಕ ವರ್ಷ ಎಂಬುದು ಹೊಸ ಕಲ್ಪನೆ. ಕಳೆದ ವರ್ಷ 1ರಿಂದ 9ನೇ ತರಗತಿಯವರೆಗೆ ಪರೀಕ್ಷೆ ನಡೆಸದೇ ಪಾಸ್ ಮಾಡಲಾಗಿತ್ತು. ಹಾಗೆಂದು ಅದನ್ನು ಶೂನ್ಯ ವರ್ಷವೆಂದು ಪರಿಗಣಿಸಿರಲಿಲ್ಲ ಎಂದು ತಿಳಿಸಿದರು.
ಈ ವರ್ಷ ಇನ್ನೂ ಸಮಯ ಸಾಕಷ್ಟಿದೆ. ಶಾಲಾರಂಭದ ಬಗ್ಗೆ ಮಕ್ಕಳ ಯೋಗಕ್ಷೇಮ ಹಾಗೂ ಭವಿಷ್ಯ, ಅವರ ಹಿತ ಹಾಗೂ ಆರೋಗ್ಯವನ್ನು ಮನಸ್ಸಿನಲ್ಲಿಟ್ಟು ಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಪದವಿ ತರಗತಿಗಳನ್ನು ಆರಂಭಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜೊತೆ ಚರ್ಚಿಸಿದ್ದೇವೆ. ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ಸಾಧ್ಯವಾದಾಗಲೆಲ್ಲ ಪೋಷಕರ ಜೊತೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿ ದ್ದೇವೆ. ಮುಂದಿನ ದಿನಗಳಲ್ಲಿ ಶಾಲಾರಂಭದ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದವರು ಹೇಳಿದರು.
ವಿದ್ಯಾಗಮ ಸತ್ತು ಹೋಗಿದೆ ಎಂಬ ಅಭಿಪ್ರಾಯವನ್ನು ಒಪ್ಪದ ಅವರು, ವಿದ್ಯಾಗಮ ಉತ್ತಮ ಕ್ರಮವಾಗಿತ್ತು. ಕೆಲವರು ಅದನ್ನು ಸಾಯಿಸುವ ಪ್ರಯತ್ನ ಮಾಡಿದ್ದಾರೆ. ವಿದ್ಯಾಗಮವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆಯಷ್ಟೇ. ಅದನ್ನು ಸುಧಾರಣೆ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.
ಸರ್ಕಾರಿ ಶಾಲೆಗಳಿಗೆ ಸಾವಿರಾರು ಎಕರೆ ಭೂದಾನ ಮಾಡಲಾಗಿದೆ. ಆದರೆ, ಆ ಜಮೀನು ಶಾಲೆಯ ಹೆಸರಿಗೆ ಆಗಿಲ್ಲ ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಜಮೀನನ್ನು ಶಾಲೆಗಳ ಹೆಸರಿಗೆ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಇದಕ್ಕಾಗಿ ಕಂದಾಯ ಇಲಾಖೆ ಜೊತೆಗೂಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ತೊಡಕುಗಳು ಎದುರಾಗಿರುವ ಬಗ್ಗೆ ಕೇಳಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೇ ಸಮಸ್ಯೆ ಎದುರಾಗಿಲ್ಲ. ತಾಂತ್ರಿಕ ಸಮಸ್ಯೆ ಇದ್ದುದನ್ನು ಬಗೆಹರಿಸಲಾಗಿದೆ ಎಂದು ಹೇಳಿದರು.