ರಾಜ್ಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ
ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ, 50 ಕೋಟಿ ರೂ. ಅನುದಾನ ಸಹ ನೀಡಿದೆ. ಆದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ಕೊಟ್ಟಿರುವುದು ಕೇವಲ 5 ಕೋಟಿ ಮಾತ್ರ. ನವೆಂಬರ್‍ನಲ್ಲಿ ಎಂಇಎಸ್ ಕರಾಳ ದಿನ ಮಾಡುತ್ತದೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನಿಗೆ ವಿರೋಧಿಸುತ್ತದೆ. ಇಂತಹವರಿಗೆ ಮರಾಠ ಅಭಿ ವೃದ್ಧಿ ನಿಗಮ ಸ್ಥಾಪಿಸುವ ಅಗತ್ಯತೆ ಏನಿತ್ತು. ಮರಾಠಿ ಭಾಷಿಕರ ಮತಕ್ಕಾಗಿ ರಾಜ್ಯ ಸರ್ಕಾರವು ಇಂತಹ ರಾಜಕಾರಣ ಮಾಡಲು ಹೊರಟಿದೆ.
ದಾವಣಗೆರೆ, ನ.19- ಬೆಳಗಾವಿ, ಕಾರವಾರ ತಮ್ಮ ರಾಜ್ಯದ್ದು ಎಂಬುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹೇಳಿಕೆ ನೀಡಿದರೂ ಎಚ್ಚರಿಕೆ ನೀಡುವ ತಾಕತ್ತು ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಇಲ್ಲವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಬೆಳಗಾವಿ, ಕಾರವಾರ ಮಹಾರಾಷ್ಟ್ರದ್ದು ಎಂಬ ಉದ್ಧ ಟತನದ ಹೇಳಿಕೆ ನೀಡಿದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡುವ ಬದಲಿಗೆ ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಜಾಯಿಷಿ ನೀಡುತ್ತಾರೆ. ಇನ್ನಾದರೂ ರಾಷ್ಟ್ರೀಯ ಪಕ್ಷಗಳನ್ನು ಬಹಿಷ್ಕರಿಸುವ ಕೆಲಸ ರಾಜ್ಯದಲ್ಲಿ ಆಗಬೇಕು ಎಂದು ತಿಳಿಸಿದರು.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿಗೆ ಎಚ್ಚರಿಕೆ ಕೊಡುವುದನ್ನು ಬಿಟ್ಟು, ಕನ್ನಡ ಪರ ಹೋರಾಟಗಾರರಿಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡುವುದು ಸರಿಯಲ್ಲ. ಸರ್ಕಾರದ ಇಂತಹ ದಬ್ಬಾಳಿಕೆ, ಬೆದರಿಕೆಗೆ ನಾವ್ಯಾರೂ ಬಗ್ಗುವುದಿಲ್ಲ. ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿದರು.
ಜಾತಿ ಮತಗಳಿಗಾಗಿ ಪ್ರಾಧಿಕಾರ, ನಿಗಮ, ಮಂಡಳಿ ಸ್ಥಾಪಿಸಿ ನಮ್ಮ ನಮ್ಮಲ್ಲೇ ಬೆಂಕಿ ಹಚ್ಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಅತ್ತ ಕೇಂದ್ರ ಸರ್ಕಾರವು ಮೀಸಲಾತಿ ತೆಗೆಯುವ ಚಿಂತನೆಯಲ್ಲಿದೆ. ಓಟಿಗಾಗಿ ಮುಂದಿನ ದಿನಗಳಲ್ಲಿ ಮಾರ್ವಾಡಿ ಗಳಿಗೆ, ತಮಿಳಿಗರಿಗೆ, ಗುಜರಾತಿಗಳಿಗೆ ಅಭಿ ವೃದ್ಧಿ ನಿಗಮವನ್ನು ತಂದರೂ ತರಬಹುದು. ತಕ್ಷಣವೇ ರಾಜ್ಯ ಸರ್ಕಾರವು ಮರಾಠ ಅಭಿ ವೃದ್ಧಿ ನಿಗಮ ಸ್ಥಾಪಿಸುವ ಆದೇಶ ಹಿಂಪಡೆ ಯಬೇಕು ಎಂದು ತಾಕೀತು ಮಾಡಿದರು.
ಕನ್ನಡ ಪರ ಸಂಘಟನೆಗಳು ಬರುವ ಡಿಸೆಂಬರ್ 5ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಸಂಘಟನೆಗಳಲ್ಲಿ ಒಂದಿಷ್ಟು ಗೊಂದಲವಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ತಿಂಗಳಾನುಗಟ್ಟಲೇ ಎಲ್ಲವೂ ಸ್ಥಗಿತಗೊಂಡಿದ್ದರಿಂದ ಬಂದ್ ಮಾಡಿದರೆ ಜನರಿಗೆ ಕಷ್ಟವಾಗುವ ಹಿನ್ನೆಲೆಯಲ್ಲಿ ಎಲ್ಲಾ ಸಂಘಟನೆಗಳು ಬಂದ್ ಕುರಿತಂತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆಂದರು.