ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ
ದಾವಣಗೆರೆ, ನ.19- ಜಿಲ್ಲೆಯ ರಫ್ತು ಉದ್ದಿಮೆ ದಾರರ ಕುಂದು ಕೊರತೆಗಳನ್ನು ನಿವಾರಿಸಿ, ರಫ್ತಿಗೆ ಉತ್ತೇಜನ ನೀಡಲು ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿಯನ್ನು ರಚಿಸಲಾಗಿದ್ದು, ಇನ್ನು ಮುಂದೆ ನಿಯ ಮಿತವಾಗಿ ಸಭೆ ಕರೆದು ರಫ್ತುದಾರರ ಅಹವಾಲುಗಳನ್ನು ಆಲಿಸಿ, ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿಗೆ ಅವಶ್ಯ ವಾದ ಸದಸ್ಯರನ್ನು ನೇಮಿಸಿ ಮಾತನಾಡಿ, ಜಿಲ್ಲೆ ಯನ್ನು ರಫ್ತು ಹಬ್ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ವಿದೇಶಿ ವ್ಯಾಪಾರದ ಹೆಚ್ಚುವರಿ ಪ್ರಧಾನ ನಿರ್ದೇಶಕ ಜಿ.ವಿ.ಪಾಟೀಲ್ ಮಾತನಾಡಿ, ಜಿಲ್ಲಾ ರಫ್ತು ಉತ್ತೇಜನಾ ಸಮಿತಿಯನ್ನು ರಚಿಸಲಾಗಿದ್ದು, ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ತೃಣಧಾನ್ಯ (ನವಣೆ, ಸಜ್ಜೆ, ಸಾವೆ, ರಾಗಿ) ಹಾಗೂ ಮೆಕ್ಕೆಜೋಳ ಮತ್ತು ಉಪ ಉತ್ಪನ್ನಗಳನ್ನು ಗುರುತಿಸಲಾಗಿದೆ ಎಂದರು.
ರಫ್ತು ತಾಣಕ್ಕೆ ಕ್ರಿಯಾ ಯೋಜನೆ : ‘ಡಿಸ್ಟ್ರಿಕ್ಟ್ ಆಸ್ ಎ ಎಕ್ಸ್ಪೋರ್ಟ್ ಹಬ್’ ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಮೆಕ್ಕೆಜೋಳ, ತೃಣಧಾನ್ಯಗಳು ಸೇರಿದಂತೆ ಏಳು ಉತ್ಪನ್ನಗಳನ್ನು ಗುರುತಿಸಿದ್ದು, ಇವುಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಹಾಗೂ ಉತ್ಪನ್ನಗಳ ಪೂರೈಕೆ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿ ಜಿಲ್ಲಾ ಕ್ರಿಯಾ ಯೋಜನೆ ತಯಾರಿಸಬೇಕು. ಜಿಲ್ಲೆಯಲ್ಲಿ ಎಷ್ಟು ರಫ್ತುದಾರರು ತಮ್ಮ ಉತ್ಪನ್ನಗಳನ್ನು ಯಾವ ದೇಶಗಳಿಗೆ ಎಷ್ಟು ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ ಎಂಬ ಮಾಹಿತಿ ಸೇರಿಸಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಡಿಸೆಂಬರ್ ಒಳಗೆ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಅಲ್ಲದೇ ಜಿಲ್ಲೆಯ ಉತ್ಪನ್ನಗಳಿಗೆ ಅವಶ್ಯಕವಾದ ಪರೀಕ್ಷಾ ಕೇಂದ್ರಗಳು, ಸಾಗಾಣಿಕೆ ಹಾಗೂ ಇತರೆ ವ್ಯವಸ್ಥೆ ಬಗ್ಗೆ ಸಹ ಉದ್ದಿಮೆದಾರರಿಂದ ಪ್ರಸ್ತಾವನೆ ಪಡೆದು ಸಲ್ಲಿಸುವಂತೆ ತಿಳಿಸಿದರು.
ಗ್ರೀನ್ ಆಗ್ರೋ ಪ್ಯಾಕ್ ಪ್ರೈ.ಲಿ ನ ಮಾಲೀಕ ಕರಿಬಸಪ್ಪ, ಇಂಡಸ್ ವೆಜ್ ಪ್ರೊ ಪ್ರೈ.ಲಿ ನ ಗಿರೀಶ್, ವೆಲ್ಕಸ್ತ ಫೌಂಡ್ರಿಯ ಮಾಲೀಕ ಸತ್ಯನಾರಾಯಣ, ಉದ್ದಿಮೆದಾರ ಪ್ರಕಾಶ್, ಮಿಲ್ಲೆಟ್ ಸಂಸ್ಕರಣಾ ಘಟಕದ ಕೃಪಾ ಅವರುಗಳು ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಮೆಕ್ಕೆಜೋಳ ಉದ್ದಿಮೆದಾರ ತುರ್ಚಘಟ್ಟದ ಬಸವರಾಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ಏಳು ಮೆಕ್ಕೆಜೋಳ ಘಟಕ ಸ್ಥಾಪಿಸಿದ್ದು ಈ ಪೈಕಿ ಐದು ಕಾರ್ಯ ನಿರ್ವಹಿಸುತ್ತಿವೆ. ಸಕ್ರಿಯವಾಗಿರುವ ಘಟಕಗಳಿಗಾದರೂ ಶೀಘ್ರವಾಗಿ ಸಾಲ ಬಿಡುಗಡೆ ಮಾಡುವಂತೆ ಕೋರಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಲೀಡ್ ಬ್ಯಾಂಕ್ ಮ್ಯಾನೇಜರ್ರವರು ಸಾಲ ವಿಳಂಬ ಸೇರಿದಂತೆ ಇತರೆ ಸಮಸ್ಯೆ ಕುರಿತು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ, ಉಪ ನಿರ್ದೇಶಕ ಮಂಜುನಾಥ್, ಗ್ರಾಮಾಂತರ ಕೈಗಾರಿಕಾ ವಿಭಾಗದ ಪ್ರಭಾರ ಉಪನಿರ್ದೇಶಕ ಮನ್ಸೂರ್, ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ್. ಕೈಗಾರಿಕಾ ವಿಸ್ತರಣಾಧಿಕಾರಿ ಶ್ರೀಕಾಂತ ಎಸ್.ಎಸ್, ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಎನ್.ಸಿ.ಹನುಮಂತರಾವ್, ಝಡ್.ಕೆ.ಗಾರ್ಮೆಂಟ್ಸ್ನ ಡಿ.ಶೇಷಾಚಲ, ರಫ್ತು ಉದ್ದಿಮೆದಾರರಾದ ಸಂದೀಪ್, ಮಹಾದೇವಯ್ಯ, ನಾಗರಾಜಪ್ಪ, ಪ್ರದೀಪ್ ಹಾಗೂ ಇತರರು ಇದ್ದರು.