ಹರಪನಹಳ್ಳಿ, ನ.17- ತಾಲ್ಲೂಕಿನ 5 ಪದವಿ ಕಾಲೇಜುಗಳ ಪ್ರಾರಂಭಕ್ಕೆ ಸಿಬ್ಬಂದಿಗಳಿಗೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ವರದಿ ಬಂದ ನಂತರವೇ ತರಗತಿಗಳಿಗೆ ಹಾಜರಾಗುವಂತೆ ಸೂಚಿಸಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ಹೇಳಿದರು.
ಪಟ್ಟಣದ ಎಡಿಬಿ ಪದವಿ ಕಾಲೇಜು ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದ ಮಾರ್ಗ ಸೂಚಿಯಂತೆ ಮಂಗಳವಾರ ಕಾಲೇಜಿನಲ್ಲೇ ಸಕಲ ಸಿದ್ಧತೆಯಿಂದ ವೈರಾಣು ಪರೀಕ್ಷೆಗೆ ಗಂಟಲು ದ್ರವ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಿಂದ ಸಂಗ್ರಹಿಸಿರುವ ದ್ರವವನ್ನು ಆರ್‍ಟಿಪಿಸಿಆರ್ ಲ್ಯಾಬ್‍ಗೆ ಕಳಿಸಿಕೊಡಲಾಗುವುದು. ವರದಿ ಬಂದ ನಂತರವೇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತರಗತಿಗಳಿಗೆ ಹಾಜರಾಗಬೇಕು. ಪ್ರತಿ ಕಾಲೇಜುಗಳಲ್ಲಿ ಗಂಟಲು ದ್ರವ ಸಂಗ್ರಹಕ್ಕೆ ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ದ್ರವ ಪರೀಕ್ಷೆ ಮಾಡಲಾಗುವುದು. ಸಮಯಕ್ಕೆ ಹಾಜರಾಗದ ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದಲ್ಲಿ ಅಥವಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದ್ರವ ಪರೀಕ್ಷೆ ಮಾಡಿಸಿಕೊಂಡು ವರದಿ ಪಡೆದು ಕಾಲೇಜಿಗೆ ಹಾಜರಾಗಬಹುದು ಎಂದರು.
ಪ್ರಾಚಾರ್ಯ ಮಲ್ಲಿಕಾರ್ಜುನ ಮಾತನಾಡಿ, ಕಾಲೇಜಿನಲ್ಲಿ ಬಿಎ, ಬಿಕಾಂ ಹಾಗೂ ಬಿಎಸ್‍ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಒಟ್ಟು 258 ಹಾಗೂ ಬೋಧಕ ಹಾಗೂ ಇತರೆ ಸಿಬ್ಬಂದಿ 52 ಜನರಿದ್ದು, ಎಲ್ಲರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಅಲ್ಲದೇ ವಿದ್ಯಾರ್ಥಿಗಳು ಪೋಷಕರಿಂದ ಕಾಲೇಜಿಗೆ ಹಾಜರಾಗಲು ಪರವಾನಿಗೆ ಪತ್ರ ತರಬೇಕು. ಸಂಪೂರ್ಣ ಕಾಲೇಜ್‍ಗೆ ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಎಸ್‍ಎಂಎಸ್ (ಮಾಸ್ಕ್, ಸ್ಯಾನಿಟೈಸರ್ ಸಾಮಾಜಿಕ ಅಂತರ ) ಪಾಲನೆ ಮಾಡಬೇಕು. ನಂತರ ತರಗತಿಗಳಿಗೆ ಪ್ರವೇಶ ಎಂದರು.
ಡಾ.ವಿಜಯಕುಮಾರ್, ಡಾ.ಆದಿತ್ಯ ಮತ್ತಿತರರು ಹಾಜರಿದ್ದರು.