ಮರಾಠ ಪ್ರಾಧಿಕಾರ ರಚನೆ ಬೆನ್ನಲ್ಲೇ ಮಹತ್ವದ ಕ್ರಮ ಕೈಗೊಂಡ ಮುಖ್ಯಮಂತ್ರಿ
ಬೆಂಗಳೂರು, ನ. 17 – ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಬೀದರ್ನ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿಯವರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಆದೇಶ ಹೊರಡಿಸಿದ್ದರು.
ರಾಜ್ಯದ ಮರಾಠಿಗರಿಗಾಗಿ ಇಂತಹ ಪ್ರಾಧಿಕಾರ ರಚನೆ ಮಾಡಿದ್ದಕ್ಕೆ ಪರ, ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಯಡಿಯೂರಪ್ಪ ಸಂಪುಟದಲ್ಲಿರುವ ಉಪಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ, ಸಚಿವರಾದ ಸೋಮಣ್ಣ ಹಾಗೂ ಬಿ.ಸಿ. ಪಾಟೀಲ್ ವೀರಶೈವ ಸಮುದಾಯದ ಏಳಿಗೆಗಾಗಿ ನಮ್ಮ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಸಹೋದ್ಯೋಗಿ ಗಳು ಒತ್ತಡ ಹೇರಿದ 24 ಗಂಟೆಯೊಳಗಾಗಿ ಮುಖ್ಯಮಂತ್ರಿ ಯವರು ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಇಂದು ಆದೇಶ ಹೊರಡಿಸಿದ್ದಾರೆ.
‘ಬಸವೇಶ್ವರ ಅಭಿವೃದ್ಧಿ ನಿಗಮ’ಎಂದಾಗಲಿ
ದಾವಣಗೆರೆ, ನ.17- ಮುಖ್ಯಮಂತ್ರಿ ಯಡಿಯೂರಪ್ಪನವರು `ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡಲು ಆದೇಶಿಸಿದ್ದು, ನಿಗಮಕ್ಕೆ `ಬಸವೇಶ್ವರ ಅಭಿವೃದ್ಧಿ ನಿಗಮ’ ಎಂದು ಹೆಸರಿಸಲಿ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಲಿಂಗಾಯತ-ವೀರಶೈವ ಎನ್ನುವಲ್ಲೇ ಜಗಳವಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ `ದೇವ ರಾಜ ಅರಸ್ ಅಭಿವೃದ್ಧಿ ನಿಗಮ’, `ಅಂಬೇಡ್ಕರ್ ಅಭಿವೃದ್ಧಿ ನಿಗಮ’, `ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮ’ ಇರುವಂತೆ ಇದನ್ನು `ಬಸವೇಶ್ವರ ಅಭಿವೃದ್ಧಿ ನಿಗಮ’ ಎಂದು ಬದಲಾಯಿಸಬೇಕು. ಜನಪರವಾಗಿರುವ ರಾಜಕೀಯೇತರ ವ್ಯಕ್ತಿಯನ್ನು ಈ ನಿಗಮದ ಅಧ್ಯಕ್ಷರನ್ನಾಗಿ ಮಾಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಹಣವನ್ನು ಇದಕ್ಕಾಗಿ ಮೀಸಲಿಡಬೇಕು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶೇ. 16 ರಷ್ಟು ಮೀಸಲಾತಿ ನೀಡಿರುವಂತೆ ಕರ್ನಾಟಕದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಲಿಂಗಾಯತರಿಗೆ ಶೇ. 16 ಮೀಸಲಾತಿ ನೀಡಬೇಕು. ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತರನ್ನು ಸೇರಿಸಬೇಕು. ಹಿಂದೆ 2 ಎ ಸೌಲಭ್ಯ ಇದ್ದದ್ದು ಈಗಿಲ್ಲ. ಹಿಂದಿನಂತೆ ಅದು ಮುಂದುವರಿಯಬೇಕು. `ಲಿಂಗಾಯತ’ ಸ್ವತಂತ್ರ ಧರ್ಮ ಎಂದು ಅಂಗೀಕರಿಸಿ, ಅದನ್ನು ಮಾನ್ಯ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದಿದ್ದಾರೆ.
`ನಿಗಮ’ಗಳು ಚುನಾವಣೆಯ ತಂತ್ರವಾಗಬಾರದು: ವಾಸ್ತವವಾಗಿ ಶೈಕ್ಷಣಿಕವಾಗಿ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿದಿರುವ ಅಂಚಿನ ಜನರಿಗೆ ಈ ನಿಗಮಗಳ ಅಗತ್ಯವಿದೆ. ಅದು ಸರ್ಕಾರದ ಜವಾಬ್ದಾರಿಯೂ ಹೌದು. `ನಿಗಮ’ಗಳು ಚುನಾವಣೆಯ ತಂತ್ರವಾಗಬಾರದು. ಹಾಗಾದರೆ ಒಂದು ಪಕ್ಷದ ಸರ್ಕಾರದಲ್ಲಿ ಸಿಕ್ಕ ಸಹಾಯ ಮತ್ತೊಂದು ಪಕ್ಷದ ಸರ್ಕಾರ ಬಂದಾಗ ಸಿಗದಿರಬಹುದು. ಸಂತ್ರಸ್ತ ಸಮುದಾಯಗಳಿಗೆ ಆದ್ಯತೆ ನೀಡಬೇಕು. ಈಗ ಎಲ್ಲ ಜನಾಂಗದವರೂ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವುದು ವಿಷಾದನೀಯ ಎಂದಿದ್ದಾರೆ ಶ್ರೀಗಳು.
ನಿಗಮ ಸರ್ಕಾರದ ಬಹುದೊಡ್ಡ ಕೊಡುಗೆ
ಹರಿಹರ, ನ.17- ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಸರ್ಕಾರ ನಮ್ಮ ವೀರಶೈವ ಲಿಂಗಾಯತ ಸಮುದಾಯಕ್ಕೆ ಕೊಟ್ಟ ಅತಿದೊಡ್ಡ ಕೊಡುಗೆ ಯಾಗಿದ್ದು, ಪಂಚಮಸಾಲಿ ಜಗದ್ಗುರುಗಳಾಗಿ ತುಂಬು ಹೃದಯದಿಂದ ಸ್ವಾಗತ ಮಾಡು ತ್ತೇನೆ ಎಂದು ಪೀಠದ ಶ್ರೀ ವಚನಾನಂದ ಸ್ವಾಮಿಗಳು ತಿಳಿಸಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯದ ಪರವಾಗಿ ನಾವೆಲ್ಲ ಮಠಾಧೀಶರು ಮೊದಲಿನಿಂದಲೂ ಅಭಿವೃದ್ಧಿ ಕೆಲಸಗಳಿಗಾಗಿ ಬೇಡಿಕೆ ಇಡುತ್ತಲೇ ಬಂದಿದ್ದೇವೆ.ಯಡಿಯೂರಪ್ಪನವರ ಸರ್ಕಾರ ಬಂದಾಗಲೆಲ್ಲ ಆ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿದೆ. ಈಗಲೂ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ ಕೊಡುಗೆ ನೀಡಿದ್ದಾರೆ.
ವೀರಶೈವ ಲಿಂಗಾಯತ ಪರಂಪರೆಯಲ್ಲಿ ಬಹುಪಾಲು ಪಂಚಮಸಾಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಪಂಚಮಸಾಲಿ ಸಮುದಾಯಕ್ಕೆ ಅನುಕೂಲವೇ ಆಗಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಮೀಸಲಿಡುವಂತೆ ನಾವು ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.
ಜೊತೆಗೆ ಕಿತ್ತೂರು ರಾಣಿ ಚನ್ನಮ್ಮ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ನಮ್ಮ ಬಹುದಿನಗಳ ಬೇಡಿಕೆಯಿದೆ. ಮುಖ್ಯಮಂತ್ರಿಗಳು ಆದಷ್ಟು ಬೇಗ ಸ್ಥಾಪನೆ ಮಾಡುವ ಮೂಲಕ ಬೇಡಿಕೆಗೆ ಸ್ಪಂದಿಸಬೇಕು. ಹೈದರಾಬಾದ್ ಕರ್ನಾಟಕವನ್ನು `ಕಲ್ಯಾಣ ಕರ್ನಾಟಕ’ ಅಂತಾ ನಾಮಕರಣ ಮಾಡಿದ ಹಾಗೆ ಮುಂಬೈ ಕರ್ನಾಟಕವನ್ನ `ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡುವಂತೆ ಈ ಮೂಲಕ ಒತ್ತಾಯಿಸುವುದಾಗಿ ಶ್ರೀಗಳು ತಿಳಿಸಿದ್ದಾರೆ.
2ಎ ಪ್ರವರ್ಗಕ್ಕೆ ಸೇರಿಸಲಿ ; ನಿಗಮ ಸ್ಥಾಪನೆಗೆ ಎಸ್ಸೆಸ್ ಸ್ವಾಗತ
ದಾವಣಗೆರೆ, ನ. 17- ರಾಜ್ಯ ಸರ್ಕಾರ ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಆದೇಶಿಸಿರುವುದನ್ನು ಅಖಿಲ ಭಾರತ ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ|| ಶಾಮ ನೂರು ಶಿವಶಂಕರಪ್ಪ ಸ್ವಾಗತಿಸಿ ದ್ದು, ವೀರಶೈವ-ಲಿಂಗಾಯಿತ ಸಮಾಜವನ್ನು 2 ಎ ವರ್ಗಕ್ಕೆ ಸೇರ್ಪಡೆ ಮಾ ಡಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ವೀರಶೈವ-ಲಿಂಗಾಯಿತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿದ್ದು, ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಾಗೂ 2 ಎ ವರ್ಗಕ್ಕೆ ಸಮಾಜವನ್ನು ಸೇರ್ಪಡೆ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿತ್ತು.
ರಾಜ್ಯ ಸರ್ಕಾರ ನಿಗಮ ಸ್ಥಾಪನೆಗೆ ಮುಂದಾಗಿದ್ದು, ಶೀಘ್ರ 2 ಎ ವರ್ಗಕ್ಕೆ ವೀರಶೈವ-ಲಿಂಗಾಯಿತ ಸಮಾಜವನ್ನು ಸೇರ್ಪಡೆ ಮಾಡಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದ ಅವರು ನಿಗಮಕ್ಕೆ ಅನುದಾನವನ್ನು ಜನಸಂಖ್ಯೆ ಆಧಾರದ ಮೇಲೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಮತ್ತಿತರರಿದ್ದರು.
ರಾಜ್ಯದಲ್ಲಿ ಈ ಸಮಾಜದ ಜನಾಂಗದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಿದ್ದಾರೆ.
ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇಂತಹ ನಿಗಮವನ್ನು ಸ್ಥಾಪಿಸುವುದು ಅಗತ್ಯವಿದೆ ಎಂದು ಮುಖ್ಯಮಂತ್ರಿಯವರು ಮುಖ್ಯಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ ತಕ್ಷಣದಿಂದ ಜಾರಿಗೆ ಬರುವಂತೆ ಈ ನಿಗಮವನ್ನು ಸ್ಥಾಪನೆ ಮಾಡಬೇಕೆಂದು ಮುಖ್ಯಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ.
ಮುಖ್ಯಮಂತ್ರಿಯವರು ಕಳೆದ 48 ಗಂಟೆಗಳಲ್ಲಿ ಒಂದು ಮರಾಠಿಗರಿಗೆ ಮತ್ತು ವೀರಶೈವ – ಲಿಂಗಾಯತ ಸಮುದಾಯವನ್ನು ಸೆಳೆದುಕೊಳ್ಳಲು ಇಂತಹ ಅಭಿವೃದ್ಧಿ ನಿಗಮಗಳನ್ನು ರಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮುಂದೆ ನಡೆಯುತ್ತಿರುವ ಉಪಚುನಾವಣೆಯ ಕ್ಷೇತ್ರಗಳಲ್ಲೂ ಮರಾಠಿಗರ ಜೊತೆಗೆ ವೀರಶೈವ – ಲಿಂಗಾಯತ ಸಮುದಾಯದ ಮತದಾರರೇ ನಿರ್ಣಾಯಕರಾಗುತ್ತಾರೆ. ಮುಖ್ಯಮಂತ್ರಿಯವರು ತಮ್ಮ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ್ದಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗವು, ವೀರಶೈವ ಲಿಂಗಾಯತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.