ದಾವಣಗೆರೆ, ನ. 15- ಕಾಲೇಜುಗಳಲ್ಲಿ ಪ್ರಾಂಶುಪಾಲರು-ಅಧ್ಯಾಪಕರ ತುರ್ತು ಸಭೆಗಳು, ಕೊಠಡಿಗಳ ಸ್ಯಾನಿಟೈಸ್, ಬಾರದ ಕೊರೊನಾ ಫಲಿತಾಂಶ, ವಿದ್ಯಾರ್ಥಿಗಳು- ಉಪನ್ಯಾಸಕರಲ್ಲಿ ಬಗೆ ಹರಿಯದ ಗೊಂದಲ.
ಕಾಲೇಜು ಪುನರಾರಂಭಗೊಂಡ ಮೊದಲ ದಿನ ನಗರದ ಕಾಲೇಜುಗಳಲ್ಲಿ ಕಂಡ ಹೈಲೆಟ್ಸ್ ಇವು. ಕೊರೊನಾ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿನಿಂದ ಕಾಲೇಜು ವಂಚಿತ ವಿದ್ಯಾರ್ಥಿಗಳು ಮತ್ತೆ ಕಾಲೇಜು ಪ್ರವೇಶಿಸುವ ದಿನ ಬಂದಿದೆಯಾದರೂ, ಆರಂಭಿಕ ಗೊಂದಲಗಳ ಸರದಿ ಮುಂದುವರೆದಿದೆ.
ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜು ಉಪನ್ಯಾಸಕರು ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ನಾಲ್ಕೈದು ದಿನಗಳು ಕಳೆದರೂ ಫಲಿತಾಂಶ ಬಾರದಿರುವು ದು ಉಪನ್ಯಾಸಕರ ಗೊಂದಲಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕೆಲ ಕಾಲೇಜುಗಳು ತುರ್ತು ಸಭೆ ನಡೆಸಿವೆ. ಫಲಿತಾಂಶ ಪಾಸಿಟಿವ್ ಬಂದಿದ್ದರೆ ಆರೋಗ್ಯ ಇಲಾಖೆಯಿಂದ ಕರೆ ಬರುತ್ತದೆ. ಕರೆ ಬಾರದೇ ಇರುವುದರಿಂದ `ನೆಗೆಟಿವ್’ ಎಂದು ಪರಿಗಣಿಸಲು ಕೆಲ ಕಾಲೇಜುಗಳು ನಿರ್ಧರಿಸಿವೆ. ಆದರೆ ದಾವಿವಿ ಉಪ ಕುಲಪತಿಗಳು ಇಂತಹ ತೀರ್ಮಾನ ಸೂಕ್ತವಲ್ಲ ಎಂದಿದ್ದಾರೆ. ಒಂದೆರಡು ದಿನ ತಡವಾದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದಿದ್ದಾರೆ.
ಇತ್ತ ಕಾಲೇಜುಗಳಲ್ಲಿ ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸದ್ಯ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿ ನಡೆಸಲಿವೆ. ಉಳಿದಂತೆ ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್ ವ್ಯವಸ್ಥೆಯಲ್ಲೇ ಬೋಧನೆ ಮುಂದುವರಿಯಲಿವೆ. ವಿದ್ಯಾರ್ಥಿಗಳು ಭೌತಿಕ ತರಗತಿಯಲ್ಲಿ ಭಾಗವಹಿಸಲು ಇಚ್ಛಿಸದೇ ಇದ್ದಲ್ಲಿ ಆನ್ ಲೈನ್ ಬೋಧನಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಹಾಗೆಯೇ ವಿದ್ಯಾರ್ಥಿಗಳು ಕಾಲೇಜಿಗೆ ಕಡ್ಡಾಯವಾಗಿ ಬರಬೇಕು ಎಂದು ಆಡಳಿತ ಮಂಡಳಿಗಳು ಒತ್ತಡ ಹೇರುವಂತೆಯೂ ಇಲ್ಲ.
ನೆಗೆಟಿವ್ ರಿಪೋರ್ಟ್ ಕಡ್ಡಾಯ : ಪ್ರೊ.ಹಲಸೆ
ದಾವಣಗೆರೆ ವಿವಿಯ ಅಂತಿಮ ವರ್ಷದ ಪದವಿ ತರಗತಿಗಳು ಇಂದಿನಿಂದ ಆರಂಭವಾಗಲಿವೆ. ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡಬಾರದೆಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಡ್ಡಾಯವಾಗಿ ಕೋವಿಡ್-19 ಟೆಸ್ಟ್ ಮಾಡಿಸಲಾಗಿದ್ದು, ನೆಗೆಟಿವ್ ವರದಿ ಬಂದವರು ಮಾತ್ರ ಕಾಲೇಜು ಪ್ರವೇಶಿಸಬೇಕಿದೆ ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಸ್ಪಷ್ಟಪಡಿಸಿದ್ದಾರೆ.
`ಜನತಾವಾಣಿ’ಯೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಕಾರಣಗಳಿಂದ ಟೆಸ್ಟ್ ರಿಪೋರ್ಟ್ ತಡವಾಗುವ ಸಂಭವವಿರಬಹುದು. ಆದ್ದರಿಂದಲೇ ಮುಂಚಿತವಾಗಿಯೇ ಟೆಸ್ಟ್ ಮಾಡಿಸಿಕೊಳ್ಳುವಂತೆ ಪ್ರಾಂಶುಪಾಲರೊಟ್ಟಿಗೆ ನಡೆಸಿದ ಸಭೆಯಲ್ಲಿ ತಿಳಿಸಲಾಗಿದೆ. ಕೋವಿಡ್ ಟೆಸ್ಟ್ ಮಾಡಿಸಿದ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಪಾಸಿಟಿವ್ ಅಥವಾ ನೆಗೆಟಿವ್ ಎಂಬ ಸಂದೇಶ ಬರುತ್ತದೆ. ಅದನ್ನೂ ಪರಿಗಣಿಸಬಹುದು ಎಂದು ಹೇಳಿದರು.
ಕಾಲೇಜ್ ಓಪನ್, ಕ್ಯಾಂಟಿನ್ ಕ್ಲೋಸ್
ವಿದ್ಯಾರ್ಥಿಗಳು ನೀರು, ಆಹಾರ ಮನೆಯಿಂದಲೇ ತರತಕ್ಕದ್ದು, ಕಾಲೇಜು ಆವರಣದಲ್ಲಿ ಕ್ಯಾಂಟಿನ್ ಆರಂಭಿಸುವಂತಿಲ್ಲ ಎಂಬುದು ಸರ್ಕಾರದ ಮಾರ್ಗಸೂಚಿಗಳಲ್ಲೊಂದು.
ಗ್ರಾಮೀಣ ಪ್ರದೇಶ ಹಾಗೂ ದೂರದ ಸ್ಥಳಗಳಿಂದ ಬರುವ ಅನೇಕ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಮನೆಯಿಂದಲೇ ಆಹಾರ ತರಲು ಕಷ್ಟ. ಇದರಿಂದ ಕಾಲೇಜು ಕ್ಯಾಂಟಿನ್ ಗಳನ್ನೇ ಆಶ್ರಯಿಸಿದ್ದರು.
ಇದೀಗ ಕ್ಯಾಂಟೀನ್ಗಳು ಇಲ್ಲದೇ, ಹೊರಗಿನ ಹೋಟೆಲ್ಗಳಲ್ಲಿ ಹೆಚ್ಚಿನ ಹಣ ನೀಡಿ ಉಪಹಾರ ಅಥವಾ ಊಟ ಸೇವಿಸುವ ಅನಿವಾರ್ಯತೆ ಬಂದೊದಗಿದೆ.
ಸಾಮಾನ್ಯವಾಗಿ ಕಾಲೇಜು ಒಳಗಿನ ಕ್ಯಾಂಟಿನ್ಗಳು, ಕಾಲೇಜಿನ ಪ್ರಿನ್ಸಿಪಲ್ ಅಥವಾ ಆಡಳಿತ ಮಂಡಳಿಯ ಸಲಹೆ, ಸೂಚನೆ ಪಾಲಿಸುತ್ತವೆ. ಸ್ವಚ್ಚತೆ ಕಾಪಾಡಿಕೊಳ್ಳುವಂತೆ ತಾಕೀತು ಮಾಡಬಹುದು. ಆದರೆ ಹೊರಗಿನ ಹೋಟೆಲ್ಗಳಿಗೆ ಯಾವ ಭರವಸೆಯಿಂದ ಹೋಗುವುದು ? ಹೊರಗಿನ ರೆಸ್ಟೋರೆಂಟ್ಗಳಿಗೆ ಅನುಮತಿ ನೀಡಿದ ಸರ್ಕಾರ, ಕಾಲೇಜು ಕ್ಯಾಂಟಿನ್ಗಳಿಗೂ ಷರತ್ತುಬದ್ಧ ಅನುಮತಿ ನೀಡಲಿ ಎಂಬುದು ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಬೇಡಿಕೆ.
ಕಾಲೇಜಿನಲ್ಲಿ ತರಗತಿ ಆರಂಭಕ್ಕೆ ಸರ್ಕಾರದ ಮಾರ್ಗಸೂಚಿ ಅನುಸರಿಸಿ, ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು 30 ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ ಕೋವಿಡ್ ಟೆಸ್ಟ್ ಮಾಡಿಸದ ಕಾರಣ ಅವರಿಗೆ ಕಾಲೇಜು ವತಿಯಿಂದಲೇ ಟೆಸ್ಟ್ ಮಾಡಿಸಲಾಗಿದೆ. ಅಲ್ಲದೆ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಗಳಿಗೂ ಟೆಸ್ಟ್ ನಡೆಸಲಾಗುತ್ತಿದೆ.
– ತೂ.ಕ. ಶಂಕರಯ್ಯ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
ಇಷ್ಟು ದಿನ ಮನೆಯಲ್ಲಿದ್ದು ಬೇಸರಗೊಂಡಿದ್ದಾರೆ. ಅಲ್ಲದೆ, ಅಂತಿಮ ವರ್ಷ ಪ್ರಮುಖ ಘಟ್ಟವಾಗಿದ್ದು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದೇ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದೆ ಉಪನ್ಯಾಸಕ ವರ್ಗ.
ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ನೆಗೆಟಿವ್ ವರದಿಯೊಂದಿಗೆ, ಪೋಷಕರ ಒಪ್ಪಿಗೆ ಪತ್ರವನ್ನೂ ತರಬೇಕಿದೆ. ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು, ಕಾಲೇಜು ಆವರಣ, ತರಗತಿಗಳಲ್ಲಿ ವಿದ್ಯಾರ್ಥಿಗಳು ಗುಂಪುಗೂಡದೆ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಮಾರ್ಗಸೂಚಿಯಿಂದ ಗೊಂದಲದಲ್ಲಿದ್ದ ಅನೇಕ ವಿದ್ಯಾರ್ಥಿಗಳು ದೂರವಾಣಿ ಕರೆ ಮಾಡಿ ತಮ್ಮ ಪ್ರಾಧ್ಯಾಪಕರುಗಳಲ್ಲಿ ಗೊಂದಲ ನಿವಾರಿಸಿಕೊಂಡು, ಕಾಲೇಜಿಗೆ ಬರಲು ಸಿದ್ಧರಾಗಿದ್ದಾರೆ.
ಸ್ವಯಂ ಪ್ರೇರಿತರಾಗಿ ವಿದ್ಯಾರ್ಥಿಗಳೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹಿಂಜರಿಯಬಹುದು ಎಂಬ ನಿಟ್ಟಿನಲ್ಲಿ ಇದೀಗ ಕೆಲವು ಕಾಲೇಜುಗಳ ಆಡಳಿತ ಮಂಡಳಿಗಳು ಕಾಲೇಜು ಆವರಣದಲ್ಲಿಯೇ ಟೆಸ್ಟ್ ಮಾಡಿಸಲು ಕ್ರಮ ಕೈಗೊಂಡಿವೆ.
ಉಪನ್ಯಾಸಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಹೇಳಲಾಗಿತ್ತಾದರೂ ಕೆಲವರು ಟೆಸ್ಟ್‌ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದೂ ಸಹ ಕೆಲ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಕೋವಿಡ್ ಟೆಸ್ಟ್ ನಡೆಸಲಾಯಿತು.
ಇನ್ನು ನಗರದ ನಾಲ್ಕು ಕಡೆ ಉಚಿತವಾಗಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದುದು ಕಂಡು ಬಂತು.
ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ
[email protected]