ಅಕ್ರಮ ಕಟ್ಟಡ ತೆರವುಗೆೋಳಿಸಿದ ದೂಡಾ

ಹೊರ ವಲಯದ ರಿಂಗ್ ರಸ್ತೆಯ ಜಾಗದಲ್ಲಿ ಸಭಾಭವನ

ದಾವಣಗೆರೆ, ನ. 14- ನಗರದ ಹೊರ ವಲಯದ ರಿಂಗ್ ರಸ್ತೆಗೆ ಯೋಜಿಸಲಾಗಿದ್ದ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಸಭಾಭವನದ ಕಟ್ಟಡವನ್ನು ಶನಿವಾರ ದೂಡಾ ವತಿಯಿಂದ ತೆರವುಗೊಳಿಸಲಾಗಿದೆ.

ದೊಡ್ಡಬಾತಿಯ ಸರ್ವೇ ನಂ. 144ರಲ್ಲಿ ಪಿ.ಬಿ. ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಎ.ಕೆ.ಎಸ್. ಕನ್ವೆನ್ಷನ್ ಹಾಲ್‌ನ ಒಂದು ಭಾಗವು ಇನ್ನೂ ಅಭಿವೃದ್ಧಿ ಪಡಿಸಬೇಕಾದ ಹೊರ ವಲಯ ರಿಂಗ್ ರಸ್ತೆಯ ಜಾಗದಲ್ಲಿತ್ತು. 

ದೂಡಾ ಅನುಮತಿ ಪಡೆಯದೇ ಈ ಕಟ್ಟಡ ನಿರ್ಮಾಣ ಮಾಡಿದ್ದನ್ನು ಗಮನಿಸಿದ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಅಕ್ರಮವಾಗಿರುವ ಕಟ್ಟಡ ತೆರವುಗೊಳಿಸಲು ಕ್ರಮ ತೆಗೆದುಕೊಂಡಿದ್ದಾರೆ. ಶನಿವಾರದಂದು ಕಟ್ಟಡದ ಗೋಡೆಯನ್ನು ಜೆ.ಸಿ.ಬಿ. ಮೂಲಕ ತೆರವುಗೊಳಿಸಲಾಯಿತು.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿ ರುವ ಶಿವಕುಮಾರ್, ಕಟ್ಟಡದ ಮಾಲೀಕರ ಗಮನಕ್ಕೆ ಉಲ್ಲಂಘನೆಯ ವಿಷಯ ತಂದಾಗ ಅವರು ಸ್ವಯಂ ಪ್ರೇರಿತ ವಾಗಿ ಕಟ್ಟಡ ತೆರವುಗೊಳಿಸಿಕೊಂಡಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಈಗಾಗಲೇ ಒಳ ವರ್ತುಲ ರಸ್ತೆಯನ್ನು ನಿರ್ಮಿಸಲಾಗಿದೆ. 120 ಅಡಿಗಳ ಹೊರ ವರ್ತುಲ ರಸ್ತೆಗಾಗಿ 320 ಕೋಟಿ ರೂ.ಗಳ ಪ್ರಸ್ತಾವನೆ ಕಳಿಸಲಾಗಿದೆ. ಈ ರಸ್ತೆ ಇನ್ನೂ ನಿರ್ಮಾಣವಾಗದೇ ಇದ್ದರೂ ಸಹ, ನಗರಾಭಿವೃದ್ಧಿ ಯೋಜನೆಯ ಭಾಗವಾಗಿರುತ್ತದೆ. ಇಲ್ಲಿ ಯಾವುದೇ ಕಟ್ಟಡವನ್ನು ನಿರ್ಮಾಣ ಮಾಡುವಂತಿಲ್ಲ ಎಂದವರು ವಿವರಿಸಿದ್ದಾರೆ.

ಪ್ರಸಕ್ತ ಈ ಕಟ್ಟಡ ಹೊರತು ಪಡಿಸಿದರೆ ಬೀಡಿ ಲೇ-ಔಟ್‌ನಲ್ಲಿ ನಿಯಮ ಉಲ್ಲಂಘಿಸಿ ಪ್ರಸ್ತಾಪಿತ ರಿಂಗ್‌ ರಸ್ತೆಯ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲಾಗಿದೆ. ಅವರಿಗೂ ಸಹ ಬೇರೆ ಜಾಗ ಕೊಟ್ಟು ಸ್ಥಳಾಂತರಿಸುವ ಪ್ರಯತ್ನ ನಡೆದಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ನಗರಾಭಿವೃದ್ಧಿ ಯೋಜನೆ ಉಲ್ಲಂಘಿಸಿ ಯಾವುದೇ ಕಟ್ಟಡ ನಿರ್ಮಿಸಿದರೂ ಅದು ಅಕ್ರಮವಾಗುತ್ತದೆ. ಹೀಗಾಗಿ ಕಟ್ಟಡ ನಿರ್ಮಾಣಕ್ಕೆ ಮುಂಚೆ ದೂಡಾ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪಾರ್ಕ್ ಜಾಗಗಳೂ ಸೇರಿದಂತೆ ನಿಯಮ ಉಲ್ಲಂಘಿಸಿ ದೂಡಾ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವುದು ಗಮನಕ್ಕೆ ಬಂದಿದೆ. ಅವುಗಳ ವಿರುದ್ಧ ಮುಂಬರುವ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ದೂಡಾ ಸದಸ್ಯರಾದ ಎಂ.ಎಂ. ದೇವೀರಮ್ಮ, ಸೌಭಾಗ್ಯಮ್ಮ, ಜಯರುದ್ರೇಶ್, ದೂಡಾ ಅಭಿಯಂತರರುಗಳಾದ ಕೆ.ಹೆಚ್. ಶ್ರೀಕರ್, ಸುಜಯ್ ಕುಮಾರ್, ಗುರುಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!