ಧಾರ್ಮಿಕ ತಳಹದಿಯ ಮೇಲೆ ಆದರ್ಶ ಜೀವನ ಸಾಗಲಿ

ಮಲೇಬೆನ್ನೂರಿನ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳ ಕಿವಿಮಾತು

ಮಲೇಬೆನ್ನೂರು, ನ.15- ಹೆಮ್ಮಾರಿ ಕೊರೊನಾ ಸೋಂಕಿನ ಬಗ್ಗೆ ಜನರು ಇನ್ನೂ 3 – 4 ತಿಂಗಳು ಜಾಗೃತರಾಗಿರಬೇಕೆಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಶ್ರೀ ಗುರು ರೇಣುಕ ರೈಸ್‌ ಇಂಡಸ್ಟ್ರೀಸ್‌ನಲ್ಲಿ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ 29ನೇ ವರ್ಷದ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದ ಜಗದ್ಗುರುಗಳು, ನಂತರ ಆಶೀರ್ವಚನ ನೀಡಿದರು. ಕೊರೊನಾ ಕಡಿಮೆ ಆಗಿದೆ ಎಂದು ಯಾರೂ ಮೈ ಮರೆಯಬೇಡಿ. ಈ ಮಹಾಮಾರಿ ಸೋಂಕು ಇಡೀ ಜಗತ್ತನ್ನು ಆವರಿಸಿ ಜನಜೀವನ ತತ್ತರಿಸುವಂತೆ ಮಾಡಿದೆ. ಇದರಿಂದ ಸಾಕಷ್ಟು ಸಾವು-ನೋವುಗಳಾಗಿ ಜನ ನೊಂದು ಹೋಗಿದ್ದಾರೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಜನರು ಈ ಸೋಂಕಿನ ಬಗ್ಗೆ ಸದಾ ಜಾಗೃತಿ ವಹಿಸಬೇಕು. ಕೊರೊನಾ ಬಂದವರು ಧೈರ್ಯ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ ಶ್ರೀಗಳು, ನಾವೂ ಕೂಡಾ ಕೊರೊನಾ ಸೋಂಕಿಗೆ ಒಳಗಾಗಿ 11 ದಿವಸ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹಿರಿಯ ಜಗದ್ಗುರು ಗಳ ಆಶೀರ್ವಾದದಿಂದ ಗುಣಮುಖರಾಗಿ ಬಂದಿದ್ದೇವೆ ಎಂದು ಹೇಳಿದರು.

ಈ ದೀಪಾವಳಿ ಜನರನ್ನು ನೋವುಗಳಿಂದ, ಅಜ್ಞಾನದ ಅಂಧಕಾರದಿಂದ ದೂರ ಮಾಡಿ ಆಯುರಾರೋಗ್ಯ ಭಾಗ್ಯ ನೀಡಿ, ಸುಖ-ಶಾಂತಿ, ಸಮೃದ್ಧಿ ತರಲೆಂದು ನಾಡಿನ ಜನತೆಗೆ ಶುಭ ಹಾರೈಸಿದ ಶ್ರೀಗಳು, ಜನರು ಆಡಂಬರದ ಜೀವನಕ್ಕೆ ಮಾರುಹೋಗದೆ, ಧಾರ್ಮಿಕ ತಳಹದಿಯ ಮೇಲೆ ಆದರ್ಶ ಜೀವನ ಸಾಗಿಸಬೇಕು ಎಂದು ಹಿತ ನುಡಿದರು.

ಕಾಯಕವೇ ಕೈಲಾಸ ಎಂಬಂತೆ ಪ್ರತಿಯೊ ಬ್ಬರೂ ತಮ್ಮನ್ನು ತಾವು ದುಡಿಮೆಯಲ್ಲಿ ತೊಡಗಿಸಿಕೊಂಡರೆ ಅಸಾಧ್ಯ ಯಾವುದೂ ಇಲ್ಲ ಎಂಬುದನ್ನು ಉದಾಹರಣೆಯೊಂದಿಗೆ ತಿಳಿಸಿದ ಜಗದ್ಗುರುಗಳು,  ರಂಭಾಪುರಿ ಪೀಠದಲ್ಲಿ ನಡೆ ಯುವ ಅನ್ನ ದಾಸೋಹಕ್ಕೆ ಮಲೇಬೆನ್ನೂರಿನ ಎಲ್ಲಾ ರೈಸ್‌ ಮಿಲ್ ಮಾಲೀಕರ ಕೊಡುಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯ ದರ್ಶಿ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಬಿ.ಪಿ. ಹರೀಶ್‌, ಜಿ.ಪಂ. ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್‌, ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್‌. ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್‌, ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್‌, ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್‌, ಪುರಸಭೆ ಸದಸ್ಯರಾದ ಬಿ.ಎಂ. ಚನ್ನೇಶ್‌ಸ್ವಾಮಿ, ಬಿ. ಸುರೇಶ್‌, ಮಾಸಣಿಗಿ ಶೇಖರಪ್ಪ, ಮಹಾಂತೇಶ್‌ಸ್ವಾಮಿ, ಬರ್ಕತ್‌ ಅಲಿ, ಯುಸೂಫ್‌, ದಾದಾವಲಿ, ಕೆ.ಜಿ. ಲೋಕೇಶ್‌, ಪಿಎಸ್‌ಐ ವೀರಬಸಪ್ಪ, ದಾವಣಗೆರೆಯ ಅಕ್ಕಿ ಉದ್ಯಮಿ ಉಳುವಯ್ಯ ಸ್ವಾಮಿ, ರೈಸ್‌ಮಿಲ್ ಮಾಲೀಕರಾದ ತೊಗಲೇರಿ ರಾಜು, ಬಿ.ಎಂ. ಹಾಲಸ್ವಾಮಿ, ಜರೀಕಟ್ಟೆ ಪ್ರವೀಣ್‌ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ರೈಸ್‌ ಮಿಲ್ ಮಾಲೀಕ ಬಿ.ಎಂ. ನಂಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ ಸ್ವಾಗತಿಸಿದರು. ಗುತ್ತಿಗೆದಾರ ಬಿ.ಎಂ. ಜಗದೀಶ್ವರಸ್ವಾಮಿ ವಂದಿಸಿದರು.

error: Content is protected !!