ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಸಾಧ್ಯ

ಚಿತ್ರದುರ್ಗ, ನ.15- ರುಚಿಯ ಜೊತೆ ಹೋದವರು ಸಾಧನೆ ಮಾಡಲಾರರು. ಆದರೆ ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಅವಿರಳ ಜ್ಞಾನಿ ಚೆನ್ನಬಸವಣ್ಣ ಉದಾಹರಣೆಯಾಗಿದ್ದಾರೆ ಎಂದು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ಮುರುಘರಾಜೇಂದ್ರ ಮಠದಲ್ಲಿ ನಡೆದ ಚೆನ್ನಬಸ ವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶರಣರು ಆಶೀರ್ವಚನ ನೀಡಿದರು.

ಅನ್ನಮಯ, ಜ್ಞಾನಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳನ್ನು ಹೇಳಿದವರು ಚೆನ್ನಬಸವಣ್ಣನವರು. ಕೋಶ ಎಂದರೆ ಕವಚ, ಭಂಡಾರ, ಶಬ್ಧಕೋಶ, ಅರ್ಥಕೋಶ ಎನ್ನುತ್ತಾರೆ. ಚೆನ್ನಬಸವಣ್ಣ ಜ್ಞಾನಕೋಶ ಬೆಳಕನ್ನು ಮೀರಿದ್ದು ಪ್ರಕಾಶ. ಚಿನ್ಮಯಜ್ಞಾನಿ, ದಿವ್ಯಜ್ಞಾನಿ ಚೆನ್ನಬಸವಣ್ಣನವರದು. ಜ್ಞಾನ ಪ್ರಕಾಶ ಅವರ ಬದುಕಿನ ಮಹೋನ್ನತಿ ಎಂದರೆ ಸುಜ್ಞಾನ ಪ್ರಕಾಶ ಚೆಲ್ಲಿದುದು. ಇವರು ಅವಿರಳರಲ್ಲಿ ಅವಿರಳರು. ಷಟ್‍ಸ್ಥಲಗಳಿಗೆ ವ್ಯಾಖ್ಯಾನ ಬರೆದವರು. ಅಮರಗಣಂಗಳಲ್ಲಿ ಕಿರಿಯರಲ್ಲಿ ಕಿರಿಯರಾದರೂ ಜ್ಞಾನದಲ್ಲಿ ಹಿರಿಯರಾಗಿದ್ದರು.

 ಅರಿವಿಂಗೆ ಹಿರಿದು ಕಿರಿದುಂಟೆ ಎಂದು ಹೇಳುತ್ತಾರೆ. ಅಲ್ಲಮಪ್ರಭುದೇವರು ಶರೀರಕ್ಕೆ ವಯಸ್ಸಿದೆ, ಆದರೆ ಜ್ಞಾನಕ್ಕೆ ವಯಸ್ಸಿಲ್ಲ ಎಂದಿದ್ದಾರೆ. ಚಿಕ್ಕವಯಸ್ಸಿನ ಚೆನ್ನಬಸವಣ್ಣನವರು ದಿವ್ಯಜ್ಞಾನಿ ಎನಿಸಿಕೊಂಡರು. ರುಚಿಯ ಜೊತೆಯಲ್ಲಿ ಸಾಗದೆ ಅಭಿರುಚಿಯ ಜೊತೆ ಸಾಗಬೇಕು. ಅಭಿರುಚಿ ಅಧ್ಯಯನಕ್ಕೆ ಸಂಬಂಧಿಸಿದುದು. ನಿರಂತರವಾಗಿ ಆಹಾರದ ಚಿಂತನೆ ಮಾಡಬಾರದು. ಜ್ಞಾನದ ಚಿಂತನೆ ಮಾಡಬೇಕು. ಚೆನ್ನಬಸವಣ್ಣ ಮಿತಭಾಷಿ ಮತ್ತು ಮಿತ ಆಹಾರಿಯಾಗಿದ್ದರು. ಅಂಗ ಪ್ರಸಾದವನ್ನು ಲಿಂಗ ಪ್ರಸಾದನ್ನಾಗಿಸಬೇಕು ಎಂದರು.

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿ ವಯ್ಯ, ಕೆಇಬಿ ಷಣ್ಮುಖಪ್ಪ, ಬಸವರಾಜ ಕಟ್ಟಿ ವೇದಿಕೆಯಲ್ಲಿದ್ದರು. ಪ್ರೊ. ಬಿ.ಎಂ. ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

ಉಮೇಶ್ ಪತ್ತಾರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎ.ಜೆ. ಪರಮಶಿವಯ್ಯ ಸ್ವಾಗತಿಸಿದರು. ಡಾ. ಸಿ.ಟಿ. ಜಯಣ್ಣ ನಿರೂಪಿಸಿದರು.

error: Content is protected !!