ದೀಪಾವಳಿ ಸಂಭ್ರಮಿಸಲು ಸಿದ್ಧತೆ : ಮಾರುಕಟ್ಟೆಯತ್ತ ಜನ

ದಾವಣಗೆರೆ, ನ.13- ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಕೆಲವೇ ದಿನಗಳು ಬಾಕಿ ಇವೆ. ಇತ್ತ ಕೊರೊನಾ  ಸೋಂಕು ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನತೆ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ಕಳೆದ ಮಾರ್ಚ್‌ನಿಂದ ಕೆಲವು ಹಬ್ಬಗಳನ್ನು ಕೊರೊನಾ ಭಯದಲ್ಲಿಯೇ ಸರಳವಾಗಿ ಆಚರಿ ಸುವಂತಾಗಿತ್ತು.  ಹಿಂದೂಗಳ ದೊಡ್ಡ ಹಬ್ಬ ಎನಿಸಿಕೊಂಡಿದ್ದ ಗಣೇಶ ಚತುರ್ಥಿ, ದಸರಾ ಹಬ್ಬಗಳೂ ಕಳೆಗುಂದಿದ್ದವು. ಇದಕ್ಕೆ ಲಾಕ್‌ಡೌನ್‌ ನಿಂದಾಗಿ ಕೆಲಸಗಳು, ವ್ಯವಹಾರಗಳಿಲ್ಲದೆ ಜನರ ಕೈಯಲ್ಲಿ ಹಣದ ಹರಿವು ಕಡಿಮೆಯಾಗಿದ್ದೂ ಕಾರಣವಾಗಿತ್ತು.

ಕಳೆದ ಒಂದೆರಡು ತಿಂಗಳಿನಿಂದ ವ್ಯವ ಹಾರಗಳು ಕೈ ಹಿಡಿದಿವೆ. ಖಾಸಗಿ ಸಂಸ್ಥೆಗಳು ಎಂದಿನಂತೆ ಉದ್ಯೋಗ, ವೇತನ ನೀಡಲು ಆರಂಭಿಸಿವೆ. ಇದರಿಂದಾಗಿ ಜನತೆ ತುಸು ನಿಟ್ಟುಸಿರು ಬಿಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಯಾಗುತ್ತಲೇ ಇದೆ. 

ಈ ಎಲ್ಲಾ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಕಳೆಕಟ್ಟುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಹಬ್ಬ ನಾಲ್ಕೈದು ದಿನಗಳು ಬಾಕಿ ಇರುವಂತೆಯೇ ನಗರದಲ್ಲಿನ ಪ್ರಮುಖ ಬಟ್ಟೆ ಅಂಗಡಿಗಳಲ್ಲಿ ಖರೀದಿ ಭರಾಟೆ  ಭರ್ಜರಿಯಾಗಿಯೇ ನಡೆಯುತ್ತಿದೆ.

ನಗರದ ಪ್ರಮುಖ ಬಟ್ಟೆ ಅಂಗಡಿಗಳಲ್ಲಿ ಜನತೆ ಕುಟುಂಬ ಸಮೇತರಾಗಿ ಬಟ್ಟೆ ಖರೀದಿಸಲು ಮುಗಿ ಬಿದ್ದಿದ್ದಾರೆ. ಮಂಡಿಪೇಟೆ, ಗಡಿಯಾರ ಕಂಬದ ಬಳಿ, ಚಾಮರಾಜೇಂದ್ರ ವೃತ್ತ, ಕಾಯಿಪೇಟೆ ಹೀಗೆ ಮಾರುಕಟ್ಟೆ ಪ್ರದೇಶ ಗಳತ್ತ ಜನರ ಹರಿವೂ ಹೆಚ್ಚಾಗತೊಡಗಿದೆ.

ದರ ಏರಿಕೆ ಬಿಸಿ: ಹಬ್ಬಗಳ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಹಜ. ಆದರೆ ಈ ಬಾರಿಯ ದೀಪಾವಳಿ ಹಬ್ಬ ಲಾಕ್‌ಡೌನ್‌ ದಾಟಿ ಕೊಂಡು ಬಂದಿರುವುದರಿಂದ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಎಂದಿಗಿಂತ ಹೆಚ್ಚಾಗಿದೆ.

ಈಗಾಗಲೇ ಎಣ್ಣೆ, ಬೆಲ್ಲ ತೀವ್ರ ಏರಿಕೆ ಕಂಡಿದೆ. ಇದರೊಟ್ಟಿಗೆ ಬೇಳೆಯ ಬೆಲೆಯೂ ಹೆಚ್ಚಾಗಿದೆ. ಲಾಕ್‌ಡೌನ್ ಮೊದಲು 80 ರೂ. ಆಸುಪಾಸು ಇದ್ದ ತೊಗರಿ ಬೇಳೆಯ ಬೆಲೆ ಲಾಕ್‌ಡೌನ್ ವೇಳೆ 100ರ ಸನಿಹವಿತ್ತು. ಆದರೆ ಇದೀಗ 125-130ರಷ್ಟಿದೆ. 

ಕಳೆದ ದಸರಾ ಹಬ್ಬದ ದಿನ ಹೂವಿನ ಬೆಲೆ ದಿಢೀರ್ ಏರಿಕೆ ಕಂಡಿತ್ತು. ಅದೇ ರೀತಿ ದೀಪಾವಳಿ ದಿನವೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂಗಡಿಗಳಲ್ಲಿ, ಮನೆಗಳಲ್ಲಿ ಲಕ್ಷ್ಮಿ ಪೂಜೆ, ಹಿರಿಯರ ಪೂಜೆ ಮುಂತಾದ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಹೂವಿಗೆ ಬೇಡಿಕೆ ಹೆಚ್ಚಾಗುತ್ತದೆ. ಕಾರಣ ಬೆಲೆಯೂ ಅನಿವಾರ್ಯವಾಗಿ ಏರಿಕೆಯಾಗಲಿದೆ.

 ಕಳೆದ ಹಲವು ತಿಂಗಳಿನಿಂದ ನಗರದತ್ತ ಮುಖ ಮಾಡದ ಗ್ರಾಮೀಣ ಪ್ರದೇಶದ ಜನತೆ, ಹಬ್ಬದ ಅಂಗವಾಗಿ ನಗರಕ್ಕಾಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇವಲ ಬಟ್ಟೆಗಳಷ್ಟೇ ಅಲ್ಲದೆ ಗೃಹೋಪಯೋಗಿ ವಸ್ತುಗಳ ಖರೀದಿಯು ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. ಇದು ವ್ಯಾಪಾರಸ್ಥರಿಗೆ ತುಸು ನೆಮ್ಮದಿ ತಂದಿದೆ.


ದೀಪಾವಳಿ ಸಂಭ್ರಮಿಸಲು ಸಿದ್ಧತೆ : ಮಾರುಕಟ್ಟೆಯತ್ತ ಜನ - Janathavaniಕೆ.ಎನ್. ಮಲ್ಲಿಕಾರ್ಜುನ ಮೂರ್ತಿ
[email protected]

error: Content is protected !!