ಚನ್ನಗಿರಿ, ನ. 13 – ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಸುವಂತೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಒತ್ತಾಯಿ ಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಇಲ್ಲಿನ ಸರ್ಕಾರಿ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಪಂಚಾಯ್ತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಲಾಗಿದ್ದ ಜನಸ್ಪಂದನ ಹಾಗೂ ವಿವಿದ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಭತ್ತ ಹಾಗೂ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಸಭೆಯಲ್ಲಿದ್ದವರಿಂದ ಆಗ್ರಹ ಕೇಳಿ ಬಂತು. ಆಗ ಮಾತನಾಡಿದ ಸಚಿವ ಬಸವರಾಜ್, ಭತ್ತದ ಖರೀದಿ ಕೇಂದ್ರ ತೆರೆಯಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮೆಕ್ಕೆಜೋಳ ಖರೀದಿಗಾಗಿ ಮುಖ್ಯಮಂತ್ರಿ ಬಳಿ ಮನವಿ ಸಲ್ಲಿಸಲಾಗಿದೆ ಎಂದರು.
ದಾವಣಗೆರೆ ಭಾಗದಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಉತ್ತಮ ಮಳೆಯಿಂದ ಮೆಕ್ಕೆಜೋಳ ಇಳುವರಿ ಚೆನ್ನಾಗಿ ಬಂದಿದೆ ಎಂದು ಹೇಳಿದರು. ಕಳೆದ ಬಾರಿ ಬೆಂಬಲ ಬೆಲೆಯಲ್ಲಿ ಇಳುವರಿ ಖರೀದಿಗೆ ಯಡಿಯೂರಪ್ಪನವರು 500 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈ ಬಾರಿಯೂ ಮೆಕ್ಕೆಜೋಳ ಖರೀದಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳ ಗಮನಕ್ಕೆ ಮತ್ತೆ ತರಲಾಗುವುದು ಎಂದು ಸಚಿವರು ತಿಳಿಸಿದರು.
ಯುಜಿಡಿ ಸೌಲಭ್ಯ : ಚನ್ನಗಿರಿಗೆ ಯು.ಜಿ.ಡಿ. ಸೌಲಭ್ಯ ಕಲ್ಪಿಸುವ ಯೋಜನೆಗೆ ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು, ಸೂಳೆಕೆರೆಯಿಂದ ನಗರಕ್ಕೆ ನೀರು ತರಲಾಗುವುದು ಎಂದು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಹಾರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನೂ ಹತ್ತು ವರ್ಷ ಮೋದಿಯವರು ಪ್ರಧಾನಿಯಾದರೆ ದೇಶದ ಚಿತ್ರಣವೇ ಬದಲಾಗಲಿದೆ. ಭಾರತ ವಿಶ್ವದಲ್ಲೇ ನಂ.1 ಆಗಲಿದೆ ಎಂದರು.
ಜಿಲ್ಲೆಗೆ ಸಚಿವ ಸ್ಥಾನ ನೀಡಲು ಭೈರತಿ ಒತ್ತಾಯ
ನಾನು ದಾವಣಗೆರೆ ಜಿಲ್ಲೆಗೆ ಉಸ್ತುವಾರಿ ಆಗಿದ್ದೇನೆ ಅಷ್ಟೇ. ಜಿಲ್ಲೆಗೆ ಸಚಿವ ಸ್ಥಾನದ ಅಗತ್ಯವಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಜಿಲ್ಲೆಯಲ್ಲಿ ಹಿರಿಯ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಅವರಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಒಗ್ಗಟ್ಟಿ ನಿಂದ ಯಾರಾದರೂ ಒಬ್ಬರಿಗೆ ಸಚಿವ ಸ್ಥಾನ ಕೊಡುವಂತೆ ಕೇಳಿದ್ದೇವೆ ಎಂದವರು ತಿಳಿಸಿದರು.
ಶೀತಲೀಕರಣ ಘಟಕ : ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯಲ್ಲಿ 7.5 ಕೋಟಿ ರೂ. ವೆಚ್ಚದ ಶೀತಲೀಕರಣ ಘಟಕಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಹಾಗೂ ಕೆ.ಎಸ್.ಡಿ.ಎಲ್. ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಒಂದೂವರೆ ವರ್ಷದೊಳಗೆ ಶೀತಲೀಕರಣ ಘಟಕ ಜನರಿಗೆ ಲಭ್ಯವಾಗಲಿದೆ ಎಂದರು.
ಕೆ.ಎಸ್.ಡಿ.ಎಲ್.ನಲ್ಲಿ 2.3 ಕೋಟಿ ರೂ.ಗಳ ಸಿ.ಎಸ್.ಆರ್. ನಿಧಿ ಇದೆ. ಇದನ್ನು ಬಳಸಿಕೊಂಡು ಚನ್ನಗಿರಿ ತಾಲ್ಲೂಕಿನ ಶಾಲೆ ಹಾಗೂ ಅಂಗನವಾಡಿಗಳಿಗೆ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದವರು ಇದೇ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪಿ.ಯು. ಕಟ್ಟಡ, ತಾಲ್ಲೂಕು ಆಯುರ್ವೇದಿಕ್ ಆಸ್ಪತ್ರೆ ಕಟ್ಟಡ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಎಸ್.ಟಿ. ಹಾಸ್ಟೆಲ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಸುಮಾರು 1211 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಮಾಯಕೊಂಡ ಶಾಸಕ ಪ್ರೊ. ಎನ್. ಲಿಂಗಣ್ಣ, ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಚನ್ನಗಿರಿ ತಾ.ಪಂ. ಅಧ್ಯಕ್ಷೆ ಕವಿತ ಕಲ್ಲೇಶ್, ಉಪಾಧ್ಯಕ್ಷೆ ಚಂದ್ರಮ್ಮ ರುದ್ರಪ್ಪ, ಜಿ.ಪಂ. ಸದಸ್ಯರಾದ ಮಂಜುಳ ಟಿ.ಬಿ., ಲೋಕೇಶಪ್ಪ, ಫಕ್ಕೀರಪ್ಪ, ಎಪಿಎಂಸಿ ಅಧ್ಯಕ್ಷ ಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ್, ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಜಿ. ಮನ್ನೋಳಿ, ಆರಕ್ಷಕ ವೃತ್ತ ನಿರೀಕ್ಷಕ ಆರ್.ಆರ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಚನ್ನಗಿರಿ ಪುರಸಭೆ ಮುಖ್ಯಾಧಿಕಾರಿ ಐ. ಬಸವರಾಜ್ ಸ್ವಾಗತಿಸಿದರು.