ಜಗಳೂರು, ನ.13- ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಧರ್ಮಸ್ಥಳ ಸಂಘ ಹೆಚ್ಚಿನ ಒತ್ತು ನೀಡುತ್ತಿದೆ. ಇದೀಗ ಶಿಕ್ಷಣಕ್ಕೆ ವಿಶೇಷ ಕಾಳಜಿ ವಹಿಸುವ ಮೂಲಕ ಸಂಘದ ಸದಸ್ಯರುಗಳ ಮಕ್ಕಳಿಗೆ ಟ್ಯಾಬ್ ಮತ್ತು ಲ್ಯಾಪ್ಟ್ಯಾಪ್ ವಿತರಣೆ ಮಾಡಿ ಉತ್ತೇಜನ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಹೇಳಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಇಂದು ನಡೆದ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ರಿಯಾಯ್ತಿ ದರದಲ್ಲಿ ಟ್ಯಾಬ್ ಹಾಗೂ ಲ್ಯಾಪ್ಟ್ಯಾಪ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸ್ವ-ಸಂಘಗಳನ್ನು ತೆರೆದು ಸದಸ್ಯರುಗಳಿಗೆ ಕೃಷಿ ಚಟುವಟಿಕೆಗೆ ಉತ್ತೇಜನ, ಧನಸಹಾಯ ಹಾಗೂ ಸಾಲ ವಿತರಣೆಯಂತಹ ಮಹತ್ವದ ಕಾರ್ಯಕ್ರಮಗಳಿಂದಾಗಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ನಿರ್ದೇಶಕ ಜನಾರ್ದನ್ ಮಾತನಾಡಿ, ತಾಲ್ಲೂಕಿನಲ್ಲಿ ಆನ್ಲೈನ್ ಶಿಕ್ಷಣ ಸದುಪಯೋಗ ಪಡೆಯಲು ಧರ್ಮಸ್ಥಳ ಸಂಘದ ವತಿಯಿಂದ 100 ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು 50 ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಅಲ್ಲದೇ ಮೆಮೋರಿ ಕಾರ್ಡ್, ಐಟಿ ವ್ಯವಸ್ಥಾಪಕರ ಮೂಲಕ ತರಬೇತಿ ಆಯೋಜನೆ ಸೇರಿದಂತೆ ನಿರ್ವಹಣೆಯನ್ನು ಜ್ಞಾನದೀಪ ಶಿಕ್ಷಕರ ಮೂಲಕ ಒದಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಇಓ ಸಿ.ಎಸ್. ವೆಂಕಟೇಶ್, ಯೋಜನಾಧಿಕಾರಿ ಗುಣಕರ್, ಜಿಲ್ಲಾ ಜಾಗೃತಿ ವೇದಿಕೆಯ ಪಿ.ಎಸ್.ಅರವಿಂದನ್, ಮಮತಾ, ಬಿ. ತಿಪ್ಪೇಸ್ವಾಮಿ, ಹಫೀಜ್ ಮತ್ತಿತರರು ಭಾಗವಹಿಸಿದ್ದರು.