ದಾವಣಗೆರೆ, ನ. 12- ಪಟಾಕಿ ವರ್ತಕರ ಮತ್ತು ಬಳಕೆದಾರರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾಗಿರುವ ಪಟಾಕಿ ಮಾರಾಟ ಮಳಿಗೆಗಳನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಸೆಸ್, ಕೊರೊನಾ ಸೋಂಕು ಎಲ್ಲಾ ರೀತಿಯ ವರ್ತಕರಿಗೂ ಬಹು ದೊಡ್ಡ ಪೆಟ್ಟು ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸೋಂಕು ಇಳಿ ಮುಖವಾಗಿರುವುದು ಸಂತಸದ ವಿಷಯ ಎಂದರು.
ಪಟಾಕಿ ವರ್ತಕರು ಸೇರಿದಂತೆ ನಗರದ ಎಲ್ಲಾ ವರ್ತಕರು ಸರ್ಕಾರ ಸೂಚಿಸಿರುವ ಕೋವಿಡ್ ನಿಯಮ ಗಳನ್ನು ಅನುಸರಿಸಿ ವ್ಯವಹಾರ ನಡೆಸುವಂತೆ ಕಿವಿ ಮಾತು ಹೇಳಿದರು. ಜನತೆ ಕೊರೊನಾ ಸಂಕಷ್ಟದಲ್ಲೂ ದೀಪಾವಳಿ ಹಬ್ಬ ಮಾಡಲು ಉತ್ಸುಕರಾಗಿದ್ದಾರೆ. ಪಟಾಕಿ ವ್ಯಾಪಾರ ಎಷ್ಟರ ಮಟ್ಟಿಗೆ ನಿಮಗೆ ಲಾಭ ತಂದು ಕೊಡುತ್ತದೋ ಗೊತ್ತಿಲ್ಲ. ಆದರೆ ಎಲ್ಲರಿಗೂ ಒಳಿತಾಗಲಿ ಎಂದು ಆಶಿಸಿದರು.
48 ಮಳಿಗೆಗಳಲ್ಲಿ ಪಟಾಕಿ ಮಾರಾಟ ಇಂದಿನಿಂದ ಆರಂಭವಾಗಿದೆ. ಉಪ ಪರಿಸರ ಅಧಿಕಾರಿ ಸಂತೋಷ್, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ, ಸಂಘದ ಅಧ್ಯಕ್ಷ ಡಿ.ಎಸ್. ಸಿದ್ದಣ್ಣ, ಕಾರ್ಯದರ್ಶಿ ಡಿ.ಎನ್. ಶಿವಾನಂದ್, ವೀರೇಶ್, ಸಾಗರ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.