ದಾವಣಗೆರೆ, ನ.12- ನಗರದ ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಛೇರ್ಮನ್ ಡಾ. ಶಾಮನೂರು ಶಿವಶಂಕರಪ್ಪ, ಬಾಪೂಜಿ ಆಸ್ಪತ್ರೆಯ ಛೇರ್ಮನ್ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜನಪರ ಕಾಳಜಿಯಿಂದ ಬಾಪೂಜಿ ಆಸ್ಪತ್ರೆಯಲ್ಲಿ ಡಯಾಬಿಟೀಸ್ ನ್ಯೂರೋಪತಿ ಕೇಂದ್ರವನ್ನು ಇಂದು ಆರಂಭಿಸಲಾಯಿತು.
ಜೆ ಜೆ ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್ ಹಾಗೂ ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಡಿ.ಎಸ್. ಕುಮಾರ್ ಅವರುಗಳು ಈ ಕೇಂದ್ರವನ್ನು ಉದ್ಘಾಟಿಸಿದರು.
ಮಧುಮೇಹ ನರರೋಗವು ಸಕ್ಕರೆ ಕಾಯಿಲೆಯ ಒಂದು ತೊಡಕಾಗಿದ್ದು ಮೊದಲು ಪಾದದ ಉರಿ, ನೋವು ಮತ್ತು ಸ್ಪರ್ಶ ಕಡಿಮೆಯಾಗಿ ಕಾಣಿಸಿಕೊಳ್ಳುತ್ತದೆ. ಈ ರೀತಿ ನರಗಳ ದೌರ್ಬಲ್ಯದಿಂದ ಗ್ಯಾಂಗ್ರೀನ್ ಮತ್ತು ಮಧುಮೇಹದ ಅಲ್ಸರ್ ಕಾಣಿಸಿಕೊಳ್ಳುತ್ತದೆ. ಈ ರೀತಿ ಆಗುವುದರಿಂದ ಕಾಲುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮುಂದೆ ಆಗುವ ಅನಾಹುತಗಳನ್ನು ಮೊದಲೇ ತಿಳಿದು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದೊಂದೇ ಇದಕ್ಕೆ ಪರಿಹಾರ. ಮಧುಮೇಹ ನರರೋಗ ತಿಳಿದುಕೊಳ್ಳಲು ನ್ಯೊರೋಟಚ್ ಟೆಸ್ಟ್ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಪಾದಗಳು ಯಾವ ಪ್ರಮಾಣದಲ್ಲಿ ನರರೋಗಕ್ಕೆ ತುತ್ತಾಗಿವೆ ಎಂದು ತಿಳಿದುಕೊಳ್ಳಬಹುದು ಮತ್ತು ಅದಕ್ಕೆ ತಕ್ಕಂತೆ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಂಡು ಮುಂದೆ ಆಗುವ ಅನಾಹುತಗಳನ್ನು ತಡೆಗಟ್ಟಬಹುದಾಗಿದೆ. ಇಂತಹ ಡಯಾಬಿಟಿಸ್ ನ್ಯೂರೋಪತಿ ಕೇಂದ್ರ ಬಾಪೂಜಿ ಆಸ್ಪತ್ರೆಯಲ್ಲಿ ಪ್ರಾರಂಭವಾಗಿದ್ದು, ಕಾಲೇಜಿನ ಸಮುದಾಯ ಆರೋಗ್ಯ ವಿಭಾಗ ಹಾಗೂ ಮೆಡಿಸಿನ್ ವಿಭಾಗದ ನೇತೃತ್ವದಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ.
ದಾವಣಗೆರೆ ಹಾಗೂ ಸುತ್ತಮುತ್ತಲಿನ ಜನರಿಗೆ ಇದು ತುಂಬಾ ಅನುಕೂಲವಾಗಲಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್ ಹೇಳಿದರು.
ಇದೇ ಸಂದರ್ಭದಲ್ಲಿ ಯೋಸ್ತ್ರ ಲಾಬ್ನ ಎನ್. ವಿನಾಯಕ ಅವರು ಈ ಒಂದು ಸಾಧನ ಉಪಯೋಗಿಸುವುದನ್ನು ಪ್ರಾತ್ಯಕ್ಷಿಕೆ ನೀಡಿ, ಅದನ್ನು ಬಳಸುವ ವಿಧಾನವನ್ನು ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ವಿಭಾಗ ಹಾಗೂ ಮೆಡಿಸಿನ್ ವಿಭಾ ಗದ ವೈದ್ಯರು, ಸಿಬ್ಬಂದಿ ವರ್ಗದವರೊಂದಿಗೆ ಎಲ್ಲಾ ವಿಭಾಗದ ವೈದ್ಯರು ಉಪಸ್ಥಿತರಿದ್ದರು.