ನಗರದಲ್ಲಿ ಸೋಂಕು ಮುಕ್ತರಾಗಿ ವಾರ ಕಳೆದ ನಂತರ್ ಸೀಲ್ ಡೌನ್
ದಾವಣಗೆರೆ, ಆ. 8- ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಜೊತೆಗೆ ಸೋಂಕಿತರ ಮನೆಗಳ ಮುಂದೆ ಸೀಲ್ ಡೌನ್ ಮಾಡುವ ಬಗ್ಗೆ ಸ್ಥಳೀಯರ ದೂರುಗಳೂ ಹೆಚ್ಚಾಗುತ್ತಿವೆ.
ಅನೇಕ ಕಡೆ ಸೀಲ್ ಡೌನ್ ಮಾಡುವ ವಿಚಾರ ಸಾರ್ವಜನಿಕರಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಕೆಲವರು ತಮ್ಮ ಪ್ರಭಾವ ಬಳಸಿ ಮನೆ ಮುಂದೆ ಸೀಲ್ ಡೌನ್ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಆಪಾದನೆಗಳೂ ಕೇಳಿ ಬರುತ್ತಿವೆ. ಮತ್ತೊಂದೆಡೆ ಅವಧಿ ಮುಗಿದರೂ ಸೀಲ್ ಡೌನ್ ತೆಗೆಯದೆ ಸತಾಯಿಸುತ್ತಿದ್ದಾರೆ ಎಂದು ಅನೇಕರು ದೂರಿದ್ದಾರೆ.
ಇತ್ತೀಚೆಗೆ ನಗರದ ಕೆ.ಬಿ. ಬಡಾವಣೆಯ ದೀಕ್ಷಿತ್ ರಸ್ತೆಯಲ್ಲಿನ ಮನೆಯೊಂದರ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಬಿಡುಗಡೆಯಾಗಿ ವಾರ ಕಳೆದಿವೆ. ಆದರೆ ಪಾಸಿಟಿವ್ ಪತ್ತೆಯಾದಾಗ ಸೀಲ್ ಡೌನ್ ಮಾಡದ ಪಾಲಿಕೆ ಸಿಬ್ಬಂದಿ, ಇದೀಗ ಆಸ್ಪತ್ರೆಯಿಂದ ಬಂದು ವಾರವಾದ ನಂತರ ಅವರನ್ನು ಮನೆ ಹಾಗೂ ಅಕ್ಕ ಪಕ್ಕದ ಮನೆಗಳೊಂದಿಗೆ ಸೀಲ್ ಡೌನ್ ಮಾಡಲು ಮುಂದಾಗಿರುವುದು ಎಲ್ಲರನ್ನೂ ಚಿಕಿತಗೊಳಿಸಿದೆ.
ಸೋಂಕಿತ ಹಾಗೂ ಮನೆಯವರೆಲ್ಲರೂ ಗುಣಮುಖರಾಗಿದ್ದು, ವಾರದ ನಂತರ ಸೀಲ್ ಡೌನ್ ಮಾಡಿದ ಬಗ್ಗೆ ಪ್ರಶ್ನಿಸಿದರೆ, ನಾವು ಶಾಮಿಯಾನದವರು. ನಮಗೆ ಪಾಲಿಕೆಯವರು ಇಲ್ಲಿ ಸೀಲ್ ಡೌನ್ ಮಾಡಲು ಹೇಳಿದ್ದಾರೆ. ನಾವು ಮಾಡುತ್ತೇವಷ್ಟೇ ಎಂಬ ಉತ್ತರ ಹೇಳಿದ್ದಾರೆ.
ವಾರದ ನಂತರ ಕೇವಲ ಸೋಂಕಿತ ವ್ಯಕ್ತಿ ಮನೆಯಲ್ಲದೆ, ಅಕ್ಕ ಪಕ್ಕದ ಮನೆಯನ್ನೂ ಸೀಲ್ ಡೌನ್ ಮಾಡುತ್ತಿರುವ ಜಿಲ್ಲಾಡಳಿತ ಕ್ರಮ ಇದೀಗ ಚರ್ಚೆಗೆ ಗ್ರಾಸವಾಗುತ್ತಿದೆ. ಮೊದಲು ಸೀಲ್ ಡೌನ್ ಮಾಡದೆ ಇರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.
ಇನ್ನು ಆವರಗೆರೆ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿ, ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೀಲ್ ಡೌನ್ ಮಾಡಿ 17 ದಿನಗಳು ಕಳೆದರೂ, ಸೀಲ್ ಡೌನ್ ತೆರವು ಮಾಡದೆ, ಸತಾಯಿಸಿದ್ದಾರೆ. ಆ ವ್ಯಕ್ತಿ ಕೊನೆಗೆ ಪ್ರಭಾವಿಯೊಬ್ಬರ ಮೊರೆ ಹೋಗಿ ಸೀಲ್ ಡೌನ್ ತೆರವು ಮಾಡಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶ ಬಾರದ ಹೊರತು ಸೀಲ್ ಡೌನ್ ತೆರವು ಮಾಡಲಾಗದು ಎಂಬುದು ಅಧಿಕಾರಿಗಳ ವಾದ. ಈ ಹಿನ್ನೆಲೆಯಲ್ಲಿಯೇ ನಗರದ ಅನೇಕ ಬಡಾವಣೆಗಳಲ್ಲಿ ಅವಧಿ ಮುಗಿದರೂ ಸೀಲ್ ಡೌನ್ ತೆರವುಗೊಂಡಿಲ್ಲ.
ಆರಂಭದಲ್ಲಿ ಕಿಲೋ ಮೀಟರ್, ನಂತರ ಮೀಟರ್, ಇದೀಗ ಮೂರು ಮನೆ, ಒಂದು ಮನೆ ಹೀಗೆ, ಒಟ್ಟಾರೆ ಸೀಲ್ ಡೌನ್ ಏಕೆ? ಹೇಗೆ? ಎಷ್ಟು ದಿನ? ಎಂಬುದು ಜನರಲ್ಲಿ ಯಕ್ಷಪ್ರಶ್ನೆಯಾಗಿದೆಯೇ ಉಳಿದಿದೆ.