ಮಾಸ್ಕ್ : ದಾಳಿಗಿಳಿದ ತಹಶೀಲ್ದಾರ್‌ಗೆ ಏಕವಚನದಲ್ಲಿ ನಿಂದಿಸಿದ ಮಹಿಳೆ

ಮಾಸ್ಕ್ ಧರಿಸದೇ ಹಬ್ಬದ ಖರೀದಿಯ ದೂರು  

ದಾವಣಗೆರೆ, ನ.11- ಸರಿಯಾಗಿ ಮಾಸ್ಕ್ ಧರಿಸದೇ ಹಬ್ಬದ ಖರೀದಿ ಭರಾಟೆಯಲ್ಲಿ ನಿರತರಾಗಿರುವ ಬಗ್ಗೆ ಬಂದ ದೂರಿನ ಮೇರೆಗೆ ದಾಳಿ ನಡೆಸಿ ದಂಡದ ಬಿಸಿ ಮುಟ್ಟಿಸಲು ಮುಂದಾದ ಇಲ್ಲಿನ ತಹಸೀಲ್ದಾರ್ ಗೆ ಮಾಸ್ಕ್ ಧರಿಸದ ಮಹಿಳೆಯೋರ್ವರು  ಏಕವಚನದಲ್ಲಿ ನಿಂದಿಸಿ ಘಾಸಿಗೊಳಿಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.

ದೀಪಾವಳಿ ಹಬ್ಬದ ಖರೀದಿಗೆ ಬಂದವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ  ಬಂದ ದೂರಿನ ಮೇರೆಗೆ ತಹಸೀಲ್ದಾರ್ ಗಿರೀಶ್ ಅವರು ಕಾಳಿಕಾದೇವಿ ರಸ್ತೆಯಲ್ಲಿ ಪರಿಶೀಲನೆಗೆ ಭೇಟಿ ನೀಡಿದ್ದರು.

ಆಗ ಮಾಸ್ಕ್ ಧರಿಸದೇ ಮಕ್ಕಳ ಸಮೇತ ಸಾರ್ವಜನಿಕವಾಗಿ ರಸ್ತೆಯಲ್ಲಿ ಹೊರಟಿದ್ದ ಮಹಿಳೆಯನ್ನು ತಡೆದು ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲು ಹೋದರು. ಆಗ ಆಕೆ ತನ್ನೊಡನೆ ಬಂದಿದ್ದ ಮಕ್ಕಳಿಗೆ ಬೆದರಿಸುತ್ತಾ, ತಹಸೀಲ್ದಾರ್ ಎಂಬ ಅರಿವಿಲ್ಲದೇ ನಾವು ದೆಹಲಿಯಿಂದ ಬಂದಿದ್ದೇವೆ. ಕೊರೊನಾ ಬಗ್ಗೆ ನಮಗೂ ಪರಿಜಾನವಿದೆ. ನಿನಗೆ ಇದೆಯೇ ಎಂದು ಏಕಾಏಕಿ ತಹಶೀಲ್ದಾರ್ ಗಿರೀಶ್ ಅವರೊಂದಿಗೆ ಏಕವಚನದಲ್ಲಿ ವಾಗ್ವಾದಕ್ಕಿಳಿದು ಅಗೌರವದಿಂದ ವರ್ತಿಸುತ್ತಾ ಮುಂದೆ ಸಾಗಿದಳು. 

ತಾಳ್ಮೆಯಿಂದಲೇ ಇದ್ದ ತಹಶೀಲ್ದಾರ್ ಗಿರೀಶ್ ಅವರು ಏಕವಚನದ ಮಾತುಗಳು ಕೇಳಿದಾಕ್ಷಣವೇ ಆ ಮಹಿಳೆಯ ಬೆನ್ನು ಹತ್ತಿ ತಡೆದರು. ಅಲ್ಲದೇ, ಮಹಿಳಾ ಪೊಲೀಸ್ ಸಹಾಯಕ ಸಬ್ ಇನ್ ಸ್ಪೆಕ್ಟರ್‍ಗಳು ಹಾಗೂ ಮಹಿಳಾ ಪೇದೆಗಳು ವಶಕ್ಕೆ ಪಡೆದು ಜಾಗೃತಿ ಮೂಡಿಸುತ್ತಿರುವ ಬಗ್ಗೆ ಮನವರಿಕೆ ಮಾಡಲು ಹೋದಾಗಲೂ ಸಹ ಆ ಮಹಿಳೆ ತಹಶೀಲ್ದಾರ್ ಗಿರೀಶ್ ಅವರಿಗೆ ಏಕವಚನ ಬಳಸಿದ್ದಾಳೆ. ಮಕ್ಕಳಿಗೂ ಮಾಸ್ಕ್ ಹಾಕದೇ ಅಜಾಗರೂಕತೆ ತೋರಿದ ಕಾರಣ ದಂಡ ಕಟ್ಟುವಂತೆ ಜೋರು ಮಾಡುತ್ತಿದ್ದಂತೆ ಆ ಮಹಿಳೆ ತಹಶೀಲ್ದಾರ್ ಗಿರೀಶ್ ಗೆ ಸರ್ ಎಂಬುದಾಗಿ ಗೌರವ ತೋರುತ್ತಾ, ಅಷ್ಟೊಂದು ದಂಡ ಕಟ್ಟಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾಳೆ. ಆದರೂ ಸಹ ಬಿಡದೇ ಮಹಿಳೆಗೆ ದಂಡ ವಿಧಿಸಿ, ಮಾಸ್ಕ್ ಮಹತ್ವದ ಜೊತೆಗೆ ವರ್ತನೆಯ ಬಗ್ಗೆ ತಿಳಿ ಹೇಳಿ ಕಳಿಸಲಾಗಿದೆ.

ಕಾಳಿಕಾದೇವಿ ರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಅಂಗಡಿ ಸೇರಿದಂತೆ ಹಲವು ಜವಳಿ ಅಂಗಡಿಗಳ ಮೇಲೆ ತಹಶೀಲ್ದಾರ್ ಗಿರೀಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಮಾಸ್ಕ್ ಇಲ್ಲದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದರು.

ನಂತರ ಬಟ್ಟೆ ಅಂಗಡಿ ಮೇಲೆ ದಾಳಿ ನಡೆಸಿದ ತಹಶೀಲ್ದಾರ್ ಗಿರೀಶ್ ನೇತೃತ್ವದ ತಂಡವು ಖರೀದಿಯಲ್ಲಿ ತೊಡಗಿದ್ದ ಜನರಿಗೆ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಾಕೀತು ಮಾಡಿದರು. ಅನೇಕ ಬಟ್ಟೆ ಅಂಗಡಿಗಳೂ ಸೇರಿದಂತೆ ಬಹುತೇಕ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿತು. ಅಂತಹವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜವಳಿ ಅಂಗಡಿಯಲ್ಲಿ ಮಾಸ್ಕ್ ಇಲ್ಲದೆ ಬಟ್ಟೆ ಖರೀದಿ ಮಾಡುತ್ತಿದ್ದ ಜನರು ತಹಶೀಲ್ದಾರ್ ಗಿರೀಶ್ ಹಾಗೂ ಪೊಲೀಸರು ದಾಳಿ ನಡೆಸುತ್ತಿದ್ದಂತೆ ವೇಲು, ಸೀರೆ ಸೆರಗು, ಕರ್ಚೀಪ್ ಹಾಗೂ ಜೇಬುಗಳಿಂದ ಮಾಸ್ಕ್ ತೆಗೆದು ಹಾಕಿಕೊಂಡರು.

ಕೋವಿಡ್ ನಿಯಮ ಪಾಲನೆ ಮಾಡುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು. ಜವಳಿ ಅಂಗಡಿಯ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಲು ಕ್ಯಾಂಪ್ ಕೂಡ ಹಾಕಿಸಿದ್ದರು.

error: Content is protected !!