ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರ ಬಳಸಿ; ಇಳುವರಿ ಹೆಚ್ಚಿಸಿ

ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರ ಬಳಸಿ; ಇಳುವರಿ ಹೆಚ್ಚಿಸಿ - Janathavaniಚಿತ್ರದುರ್ಗ, ಆ.9- ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆದು ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ರೈತರಿಗೆ ಸಲಹೆ ನೀಡಿದರು.

ಶ್ರೀಮಠದ ಕೃಷಿ ಭೂಮಿಯಲ್ಲಿ ಕೃಷಿ ಇಲಾಖೆ ವತಿಯಿಂದ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಕಡಿಮೆ ಖರ್ಚಿನ ನೀರಿನ ಕರಗುವ 19:19:19 ರಸಗೊಬ್ಬರ ಬಳಕೆ ವಿಧಾನ ಪ್ರಾತ್ಯಕ್ಷಿಕೆಯಲ್ಲಿ ಶ್ರೀಗಳು ಭಾಗವಹಿಸಿ, ಮಾಹಿತಿ ಪಡೆದುಕೊಂಡರು.

ಯೂರಿಯಾ ಬಳಕೆಗೆ ಪರ್ಯಾಯವಾಗಿ ಕೇವಲ ನೂರು ರೂಪಾಯಿ ವೆಚ್ಚದಲ್ಲಿ ಒಂದು ಲೀಟರ್ ನೀರಿಗೆ 3 ಗ್ರಾಂನಂತೆ 16 ಲೀಟರ್ ಕ್ಯಾನ್‌ಗೆ 50 ಗ್ರಾಂ ಬಳಸಿ, ಒಂದು ಎಕರೆ ವಿಸ್ತೀರ್ಣದ ಬೆಳೆಗೆ ಸುಮಾರು 15 ರಿಂದ 20 ಕ್ಯಾನ್ ಬಳಸಿಕೊಂಡು ಬೆಳಗಳಿಗೆ ಸಮಗ್ರವಾದ ಸಾರಜನಕ, ರಂಜಕ, ಪೋಟ್ಯಾಷ್ ಗೊಬ್ಬರವನ್ನು ನೀಡಬಹುದಾಗಿರುತ್ತದೆ. ಈ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಬೆಳೆಗೆ ಪ್ರಧಾನವಾದ ಪೋಷಕಾಂಶಗಳು ನೇರವಾಗಿ ಸಿಗುವುದಲ್ಲದೇ, ಇಳುವರಿಯೂ ಹೆಚ್ಚಾಗುತ್ತದೆ. ಕಡಿಮೆ ಖರ್ಚಿನಲ್ಲಿ ಪೋಷಕಾಂಶಗಳನ್ನು ಒದಗಿಸುವುದರ ಜೊತೆಯಲ್ಲಿ ಕೂಲಿಗೆ ತಗಲುವ ವೆಚ್ಚವನ್ನು ಕಡಿಮೆಗೊಳಿಸಲು ಸಹಕಾರಿಯಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಮಂಜುನಾಥ ಸ್ವಾಮಿ, ಚಂದ್ರಕುಮಾರ್, ಹೆಚ್.ಟಿ.ತಿಪ್ಪೇಸ್ವಾಮಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಣಾಧಿಕಾರಿಗಳಾದ ಎಂ.ಜಿ.ದೊರೆಸ್ವಾಮಿ, ವೀರೇಂದ್ರಕುಮಾರ್ ಮುಂತಾದವರಿದ್ದರು.

error: Content is protected !!