ನನ್ನ ಅಡಿಕೆ ತೋಟಕ್ಕೆ ಸೂಳೆಕೆರೆ ನೀರು ಹರಿಸುವ ಹುನ್ನಾರ ನಡೆಸಿಲ್ಲ

ಚನ್ನಗಿರಿ, ನ.10- ತಾಲ್ಲೂಕಿನ ಸೂಳೆಕೆರೆಯ ನೀರನ್ನು ಭೀಮಸಮುದ್ರಕ್ಕೆ ಹರಿಸುವ ಹುನ್ನಾರ ವನ್ನು ನಾನು ಎಂದಿಗೂ ಮಾಡಿಲ್ಲ. ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಃ ನೀರು ಖಾಲಿ ಮಾಡುವ ಚಿಂತನೆ ನಮ್ಮದಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದರು. 

ಅವರು, ಇಂದು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಮೈ ತುಂಬಿದ ಕಾರಣ ಬಾಗಿನ ಅರ್ಪಿಸಿ, ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ವೇದಿಕೆ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿದರು. 

2009ರಲ್ಲಿ ಡ್ಯಾಂನಲ್ಲಿ ನೀರು ಕುಸಿತ ಕಂಡಿತ್ತು. ಮಳೆ ಸಮರ್ಪಕವಾಗಿ ಬಾರದ ಕಾರಣ ಸೂಳೆಕೆರೆ ಬರಿದಾ ಗಿತ್ತು. ಆದರೆ, ಈ ಸಂದರ್ಭದಲ್ಲಿ ಸೂಳೆಕೆರೆ ನೀರಿನ್ನು ಭೀಮಸಮುದ್ರಕ್ಕೆ ಕೊಂಡೊಯ್ದು ನನ್ನ ಅಡಿಕೆ ತೋಟಕ್ಕೆ ನೀರನ್ನು ಹಾಕಿರುವುದಾಗಿ ಕೆಲ ವಿರೋಧಿಗಳು ನನ್ನ ಮೇಲೆ ಸುಳ್ಳು ಅಪಪ್ರಚಾರ ಮಾಡಿದ್ದರು. ಈ ಅಪಪ್ರಚಾರವನ್ನು ಜನರು ನಂಬಿದ್ದರು. ಇದರಿಂದ ನನಗೆ ವೈಯಕ್ತಿಕವಾಗಿ ಬಹಳ ದುಃಖವಾಗಿ ಕಣ್ಣೀರು ಹಾಕಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು. 

ಜನರಿಗೆ ಅಪಪ್ರಚಾರದ ಸತ್ಯಾಂಶ ತಿಳಿಯಿತು. ತದ ನಂತರ ನಡೆದ ಚುನಾವಣೆಯಲ್ಲಿ ಚನ್ನಗಿರಿ ಮತದಾರರು ನನ್ನ ಕೈಹಿಡಿದು 2024 ಮತಗಳ ಅಂತರದಿಂದ ಗೆಲುವು ತಂದುಕೊಟ್ಟರು. ಈ ಮೂಲಕ ನನ್ನ ಮೇಲಿದ್ದ ಅಪಪ್ರಚಾರಕ್ಕೆ ತೆರೆ ಎಳೆದಂತಾಯಿತು ಎಂದು ತಿಳಿಸಿದರು.

ಸೂಳೆಕೆರೆಯಿಂದ ಚನ್ನಗಿರಿ, ಚಿತ್ರದುರ್ಗ, ಜಗಳೂರು, ಸಿರಿಗೆರೆ, ಭೀಮಸಮುದ್ರಕ್ಕೆ ಹೋಗುವ ಮಾರ್ಗದಲ್ಲಿ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಬಳಕೆಯಾಗುತ್ತಿದೆಯೇ ವಿನಃ ಭೀಮಸಮುದ್ರಕ್ಕೆ ವೈಯಕ್ತಿಕವಾಗಿ ನೀರು ಕೊಂಡೊಯ್ಯಲಿಲ್ಲ. ಆದರೆ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ ಅವರೊಂದಿಗೆ ನಾನು ಸೇರಿಕೊಂಡು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ಬೆಳೆಗಾರರಿಗೆ ಅನುಕೂಲ ಮಾಡುವ ಉದ್ದೇಶದಿಂದ ಕೆರೆ ಬರಿದಾಗದಂತೆ ಪ್ರತಿ ವರ್ಷ 1 ಟಿಎಂಸಿ ನೀರು ಹರಿಸುವ ಯೋಜನೆ ರೂಪಿಸಿದ್ದು, ಅದು ಅನುಮೋದನೆ ಹಂತದಲ್ಲಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದಕ್ಕೆ ಅನುಮೋದನೆ ನೀಡುವ ಭರವಸೆ ಇದೆ. ಯಾವುದೇ ಕಾರಣಕ್ಕೂ ಸೂಳೆಕೆರೆಗೆ ನಾನು ಅನ್ಯಾಯ ಮಾಡಲ್ಲ. ಸೂಳೆಕೆರೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು. 

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಸೂಳೆಕೆರೆ ರಸ್ತೆಯು ಅಪಘಾತ ವಲಯದಂತಾಗಿ ಸಾವು ಸಂಭವಿಸಿವೆ. ಹಾಗಾಗಿ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿ ಈಗಾಗಲೇ ಈ ಭಾಗದಲ್ಲಿನ ರಸ್ತೆ ಅಭಿವೃದ್ದಿಗೆ ಸರ್ಕಾರ 10 ಕೋಟಿ ರೂ. ಮಂಜೂರು ಮಾಡಿದೆ. ಆದರೆ, ಕೋವಿಡ್ ಸಂದರ್ಭ ಇರುವುದರಿಂದ ಈಗ ಮೊದಲ ಕಂತಿನಲ್ಲಿ ಒಂದೂವರೆ ಕೋಟಿ ರೂ. ಬಿಡುಗಡೆಯಾದ ಹಣದಲ್ಲಿ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಮಾಡಲಾಗುವುದು. ಆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಇನ್ನೂ ಎರಡು ತಿಂಗಳಲ್ಲಿ ಉಳಿದ ಅನುದಾನ ಬರಲಿದ್ದು, ಆಗ ಈ ಭಾಗದ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು. 

ಇದೇ ವೇಳೆ 2019-20ನೇ ಸಾಲಿನ ವಿವಿಧ ಯೋಜನೆಗಳಡಿ ಮಂಜೂರಾಗಿರುವ ಚನ್ನಗಿರಿ ತಾಲ್ಲೂಕಿನ ಮಲ್ಪೆ-ಮೊಳಕಾಲ್ಮೂರು ರಸ್ತೆ ಮತ್ತು ಕೆರೆ ಏರಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಶಾಸಕ ಪ್ರೊ. ಲಿಂಗಣ್ಣ ಮಾತನಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಸದಸ್ಯರಾದ ಮಂಜುಳ ಟಿ.ವಿ. ರಾಜು, ಯಶೋಧಮ್ಮ ಮರಳಪ್ಪ, ಚನ್ನಗಿರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕವಿತಾ ಕಲ್ಲೇಶ್, ಉಪಾಧ್ಯಕ್ಷೆ ಚಂದ್ರಮ್ಮ ರುದ್ರಪ್ಪ, ಚನ್ನಗಿರಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿದೇವಿ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಜಗನ್ನಾಥ್, ತುಮ್‍ಕೋಸ್ ಅಧ್ಯಕ್ಷ ಆರ್.ಎಂ. ರವಿ ಸೇರಿದಂತೆ ಇತರರು ಇದ್ದರು.

error: Content is protected !!