ರಾಮನನ್ನು ಪೂಜಿಸುವ ಜನತೆ ಮಹರ್ಷಿ ವಾಲ್ಮೀಕಿಯನ್ನು ಮರೆತಿರುವುದು ವಿಪರ್ಯಾಸ
ಹರಪನಹಳ್ಳಿ, ಆ.6- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ನಿಜಕ್ಕೂ ಸ್ವಾಗತಾರ್ಹವಾದದ್ದು. ಆದರೆ, ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾನ್ ಗ್ರಂಥವನ್ನು ಬರೆದು ಇಡೀ ಜಗತ್ತಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಚರಿತ್ರೆ ಮತ್ತು ರಾಮರಾಜ್ಯ ಪರಿಕಲ್ಪನೆಯ ಬಗ್ಗೆ ತಿಳಿಸದಿದ್ದರೆ ಇಂದು ಅಯೋಧ್ಯೆಯಲ್ಲಿ ಶ್ರೀ ರಾಮನು ಗೌಣವಾಗಿರುತ್ತಿದ್ದ ಎನ್ನುವುದೂ ಅಷ್ಟೇ ಸತ್ಯ.
ವಾಲ್ಮೀಕಿಯಿಂದ ಸೃಷ್ಟಿಯಾದ ರಾಮ ಸೇರಿದಂತೆ ಸೀತಾ, ಲಕ್ಷ್ಮಣ, ಭರತ, ಹನುಮನಿಗೆ ಅಯೋಧ್ಯೆ ರಾಮ ಮಂದಿರದ ಆವರಣದಲ್ಲಿ ಮಂದಿರ ಕಟ್ಟಲು ಮುಂದಾಗಿರುವ ಸರ್ಕಾರ, ಇವರೆಲ್ಲರನ್ನು ರಾಮಾಯಣದ ಮೂಲಕ ಪರಿಚಯಿಸಿದ ಸೃಷ್ಟಿಕರ್ತ ವಾಲ್ಮೀಕಿಗೆ ಅಯೋಧ್ಯೆಯಲ್ಲಿ ಮಂದಿರ ಕಟ್ಟಲು ಜಾಗವಿಲ್ಲವೇ ?. ಮಹರ್ಷಿ ವಾಲ್ಮೀಕಿ ಒಂದು ಸಮುದಾಯಕ್ಕೆ ಮೀಸಲು ಮಾಡುವ ಬದಲು ಇಡೀ ಜಗತ್ತಿಗೆ ತೋರಿಸಬೇಕಿದೆ. ರಾಮನನ್ನು ಪೂಜಿಸುವ ಜನತೆ ಮಹರ್ಷಿ ವಾಲ್ಮೀಕಿಯನ್ನು ಮರೆತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.
ಅಲ್ಲದೇ, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾನಂದಪುರಿ ಶ್ರೀಗಳಿಗೆ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವ ಸರ್ಕಾರದ ಇಬ್ಬಗೆಯ ನೀತಿ ಖಂಡನೀಯ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಕಿಡಿ ಕಾರಿದ್ದಾರೆ.