ದಾವಣಗೆರೆ, ನ.7- ಸರ್ಕಾರಿ ಸ್ವಾಮ್ಯ, ಖಾಸಗಿ ಸೇರಿದಂತೆ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ಮಾರಾಟವಾಗುತ್ತಿರುವ ಬಿಎಸ್-6 ಇಂಧನದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಜಿಲ್ಲಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಖಾಸಗಿ ಕಂಪನಿಗಳಾದ ರಿಲಯನ್ಸ್, ಎಸ್ಸಾರ್, ಎಂಆರ್‍ಪಿಎಲ್, ಶೆಲ್‍ಗಳಲ್ಲಿ ಮಾರಾಟ ಮಾಡುತ್ತಿರುವ ಬಿ.ಎಸ್-6 ಇಂಧನ ಒಂದೇ ಆಗಿದ್ದು, ಇದರಲ್ಲಿ ಸಾರ್ವಜನಿಕರಿಗೆ ಯಾವುದೇ ಗೊಂದಲ ಬೇಡ ಎಂದು ಅಸೋಸಿಯೇಷನ್ ಅಧ್ಯಕ್ಷ ಎ.ಬಿ. ಶಂಭುಲಿಂಗಪ್ಪ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ. 2020ರಿಂದ ಸರ್ಕಾರಿ ಒಡೆತನದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಂದ ಬಿಎಸ್-6 ಇಂಧನವನ್ನು ಎಲ್ಲಾ ಇಂಧನ ಕೇಂದ್ರಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಏಪ್ರಿಲ್ 2020ರಿಂದ ಖಾಸಗಿ ಕಂಪನಿಗಳೂ ಅಧಿಕೃತವಾಗಿ ಬಿಎಸ್-6 ಇಂಧನ ಮಾರಾಟ ಪ್ರಾರಂಭಿಸಿವೆ. ಕರ್ನಾಟಕ ಒಂದೇ ಟರ್ಮಿನಲ್, ಡಿಪೋದಿಂದಲೇ ಎಲ್ಲಾ ಕಡೆಗೆ ಇಂಧನ ಪೂರೈಕೆಯಾಗುತ್ತಿದೆ.
ಗ್ರಾಹಕರು ಸಹ ಎಲ್ಲಾ ಇಂಧನ ಕೇಂದ್ರಗಳಲ್ಲಿ ಇಂಧನದ ಗುಣಮಟ್ಟ, ಪ್ರಮಾಣ ಪರಿಶೀಲಿಸಲು ಸಂಪೂರ್ಣ ಅಧಿಕಾರ ಉಳ್ಳವರಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಡಿ.ಎಸ್. ಸಿದ್ದಣ್ಣ, ವಿನಯಕುಮಾರ್ ಇದ್ದರು.